ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕೆ ಮಯಾಂಕ್ ಯಾದವ್ ಲಭ್ಯ
ಹೊಸದಿಲ್ಲಿ : ಗಾಯಗೊಂಡಿರುವ ಯುವ ವೇಗಿ ಮಯಾಂಕ್ ಯಾದವ್ ದೈಹಿಕ ಕ್ಷಮತೆಯನ್ನು ಮರಳಿ ಪಡೆದಿರುವುದರಿಂದ ಅವರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡ ಲಕ್ನೋ ಸೂಪರ್ ಜಯಂಟ್ಸ್ ಹೊಸ ಹುರುಪು ಪಡೆದಿದೆ. ಅವರು ಎಲ್ಲಾ ದೈಹಿಕ ಕ್ಷಮತೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ.
ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧದ ಮುಂದಿನ ಪಂದ್ಯಕ್ಕೆ ಮಯಾಂಕ್ ಲಭ್ಯರಿರುತ್ತಾರೆ ಎಂದು ಎಲ್‌ಎಸ್‌ಐ ಬೌಲಿಂಗ್ ಕೋಚ್ ಮೋರ್ನ್ ಮೊರ್ಕೆಲ್ ತಿಳಿಸಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ ಲಕ್ನೋದ ಏಕಾನ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆಯಲಿದೆ.
ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಮೂರು ಪಂದ್ಯಗಳನ್ನು ಆಡಿದ ಬಳಿಕ, ಗುಜರಾತ್ ಟೈಟಾನ್ಸ್ ವಿರುದ್ದದ ಪಂದ್ಯದಲ್ಲಿ ಅವರ ಕಿಬ್ಬೊಟ್ಟೆಯಲ್ಲಿ ಸೆಳೆತ ಕಾಣಿಸಿಕೊಂಡಿತ್ತು.
‘‘ಮಯಾಂಕ್ ಯಾದವ್ ಎಲ್ಲಾ ದೈಹಿಕ ಕ್ಷಮತೆ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿದ್ದಾರೆ. ಅವರು ಈಗ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯಕ್ಕಾಗಿ ಸಂಭಾವ್ಯ 12 ಆಟಗಾರರ ಪಟ್ಟಿಯಲ್ಲಿದ್ದಾರೆ. ಅವರು ಉತ್ತಮ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ ಮತ್ತು ಇನ್ನೊಮ್ಮೆ ಬೌಲ್ ಮಾಡಲು ಸಿದ್ಧರಾಗಿದ್ದಾರೆ’’ ಎಂದು ಸೋಮವಾರ ಪಂದ್ಯಪೂರ್ವದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೋರ್ನ್ ಮೊರ್ಕೆಲ್ ಹೇಳಿದರು.
ಏಕಾನ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಸೋಮವಾರ ಸಂಜೆ ಮಯಾಂಕ್ ಬೌಲಿಂಗ್ ಅಭ್ಯಾಸ ನಡೆಸುತ್ತಿರುವುದೂ ಕಂಡುಬಂದಿತು.
ಯಾದವ್ ಈವರೆಗೆ ಮೂರು ಐಪಿಎಲ್ ಪಂದ್ಯಗಳಲ್ಲಿ ಆಡಿ ಆರು ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ವಿರುದ್ಧದ ಪಂದ್ಯಗಳಲ್ಲಿ ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ ಒಂದು ಓವರ್ ಹಾಕಿದ ಬಳಿಕ ಅವರು ಮೈದಾನದಿಂದ ಹೊರ ಹೋದರು.