ಐಪಿ‌ಎಲ್‌ಗೂ ಮುನ್ನ ಗುಜರಾತ್ ಟೈಟಾನ್ಸ್‌ಗೆ ಶಾಕ್: ಪ್ರಮುಖ ವೇಗಿ ಮುಹಮ್ಮದ್‌ ಶಮಿ ಟೂರ್ನಿಯಿಂದ ಹೊರಕ್ಕೆ

Update: 2024-02-22 10:37 GMT

ಮುಹಮ್ಮದ್‌ ಶಮಿ (Photo:X/@MdShami11)

ಹೊಸದಿಲ್ಲಿ: ಹಿರಿಯ ವೇಗಿ ಮುಹಮ್ಮದ್‌ ಶಮಿ ಅವರಿಗೆ ಎಡ ಪಾದದ ಗಾಯ ಉಂಟಾಗಿರುವುದರಿಂದ ಮುಂದಿನ ತಿಂಗಳು ನಡೆಯಲಿರುವ ಐಪಿಎಲ್‌ನಿಂದ ಅವರು ಹೊರಗುಳಿಯಲಿದ್ದಾರೆ. ತಮ್ಮ ಗಾಯಕ್ಕೆ ಅವರು ಇಂಗ್ಲೆಂಡ್‌ನಲ್ಲಿ ಶಸ್ತ್ರಕ್ರಿಯೆಗೆ ಒಳಗಾಗಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇಂಗ್ಲೆಂಡ್‌ ವಿರುದ್ಧ ಈಗ ನಡೆಯುತ್ತಿರುವ ಟೆಸ್ಟ್‌ ಸರಣಿಯಲ್ಲಿ ಶಮಿ ಅವರಿಲ್ಲ. ಕಳೆದ ನವೆಂಬರ್‌ ತಿಂಗಳಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ವಿಶ್ವಕಪ್‌ ಪಂದ್ಯದಲ್ಲಿ ಅವರು ಕೊನೆಯ ಬಾರಿ ಭಾರತ ತಂಡದ ಭಾಗವಾಗಿ ಆಡಿದ್ದರು.

“ಶಮಿ ಅವರು ಜನವರಿ ಕೊನೆಯ ವಾರದಲ್ಲಿ ಲಂಡನ್‌ಗೆ ತೆರಳಿ ತಮ್ಮ ಗಾಯಗಳಿಗೆ ಚಿಕಿತ್ಸೆ ಪಡೆದುಕೊಂಡಿದ್ದರು. ಮೂರು ವಾರಗಳ ನಂತರ ನಿಧಾನವಾಗಿ ಓಡುವುದು ಮತ್ತಿತರ ಚಟುವಟಿಕೆಗಳನ್ನು ನಡೆಸಬಹುದೆಂದು ವೈದ್ಯರು ಅವರಿಗೆ ತಿಳಿಸಿದ್ದರು. ಆದರೆ ಚಿಕಿತ್ಸೆ ಪರಿಣಾಮಕಾರಿಯಾಗಿರದೇ ಇರುವುದರಿಂದ ಸದ್ಯ ಶಸ್ತ್ರಕ್ರಿಯೆಯೇ ಉಳಿದಿರುವ ದಾರಿ. ಅವರು ಶೀಘ್ರದಲ್ಲೇ ಇಂಗ್ಲೆಂಡ್‌ಗೆ ತೆರಳಲಿದ್ದಾರೆ, ಐಪಿಎಲ್‌ನಲ್ಲಿ ಭಾಗವಹಿಸುವ ಪ್ರಶ್ನೆಯೇ ಇಲ್ಲ,” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ವಿಶ್ವಕಪ್‌ ಪಂದ್ಯಾವಳಿಯಲ್ಲಿ ಶಮಿ ನೋವಿನ ನಡುವೆಯೂ ಬೌಲಿಂಗ್‌ ನಡೆಸಿ 24 ವಿಕೆಟ್‌ಗಳನ್ನು ಕಿತ್ತಿದ್ದರು. ಇತ್ತೀಚೆಗಷ್ಟೇ ಅವರಿಗೆ ಅರ್ಜುನ ಪ್ರಶಸ್ತಿ ಪ್ರದಾನ ಕೂಡ ಮಾಡಲಾಗಿತ್ತು.

ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಬಾಂಗ್ಲಾದೇಶ ಮತ್ತು ನ್ಯೂಝಿಲ್ಯಾಂಡ್‌ ತಂಡಗಳ ವಿರುದ್ಧ ಸ್ವದೇಶದಲ್ಲಿ ನಡೆಯುವ ಟೆಸ್ಟ್‌ ಸರಣಿಯಲ್ಲಿ ಶಮಿ ಭಾಗವಹಿಸುವುದೂ ಸಂಶಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News