ಡ್ಯಾರಿಲ್ ಮಿಚೆಲ್ ಶತಕ: ಭಾರತಕ್ಕೆ 274 ರನ್ ಗುರಿ ನೀಡಿದ ನ್ಯೂಝಿಲ್ಯಾಂಡ್
ದರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ಭಾರತದ ಗೆಲುವಿಗೆ ನ್ಯೂಝಿಲ್ಯಾಂಡ್ 274 ರನ್ ಗುರಿ ನೀಡಿದೆ.
ಡ್ಯಾರಿಲ್ ಮಿಚೆಲ್ ಆಕರ್ಷಕ ಶತಕ ಹಾಗೂ ರಚಿನ್ ರವೀಂದ್ರ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್ ಗಳಲ್ಲಿ ನ್ಯೂಝಿಲ್ಯಾಂಡ್ 273 ರನ್ ಗೆ ಆಲೌಟ್ ಆಯಿತು.
ನ್ಯೂಝಿಲ್ಯಾಂಡ್ ವಿರುದ್ಧ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇತ್ತ ಬ್ಯಾಟಿಂಗ್ ಗೆ ಇಳಿದ ಕಿವೀಸ್ ನ ಆರಂಭಿಕ ಬ್ಯಾಟರ್ ಗಳಾದ ಡೇವಾನ್ ಕಾನ್ವೆ ಶೂನ್ಯಕ್ಕೆ ಹಾಗೂ ವಿಲ್ ಯಂಗ್ ರನ್ನು 17 ರನ್ ಗೆ ಔಟ್ ಮಾಡುವ ಮೂಲಕ ಮುಹಮ್ಮದ್ ಸಿರಾಜ್ ಮತ್ತು ಶಮಿ ಆಘಾತ ನೀಡಿದರು. ಟೂರ್ನಿಯಲ್ಲಿ ಮೊದಲ ಪಂದ್ಯ ಆಡುತ್ತಿರುವ ಮುಹಮ್ಮದ್ ಶಮಿ ತಾನು ಎಸೆದ ಮೊದಲ ಬಾಲ್ ನಲ್ಲಿಯೇ ವಿಲ್ ಯಂಗ್ ರನ್ನು ಬೌಲ್ಡ್ ಮಾಡುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದರು. ಕೇವಲ 19 ರನ್ ಗೆ 2 ಪ್ರಮುಖ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ಕಿವೀಸ್ ಗೆ ಡ್ಯಾರಿಲ್ ಮಿಚೆಲ್ ಹಾಗೂ ರಚಿನ್ ರವೀಂದ್ರ ಜೋಡಿ ನಿಯಮಿತ ಅಂತರದಲ್ಲಿ ಬೌಂಡರಿ ಸಿಕ್ಸರ್ ಸಿಡಿಸುವ ಮೂಲಕ ಭಾರತದ ಸಂಘಟಿತ ಬೌಲಿಂಗ್ ದಾಳಿಯನ್ನು ನಿಭಾಯಿಸಿದರು. ರಚಿನ್ ರವೀಂದ್ರ 6 ಬೌಂಡರಿ 1 ಸಿಕ್ಸರ್ ಸಹಿತ 75 ರನ್ ಬಾರಿಸಿ ಮುಹಮ್ಮದ್ ಶಮಿ ಬೌಲಿಂಗ್ ನಲ್ಲಿ ಶುಭ ಮನ್ ಗಿಲ್ ಗೆ ಕ್ಯಾಚ್ ನೀಡಿ ಔಟ್ ಆದರೆ ನಾಯಕ ಟಾಮ್ ಲ್ಯಾಥಮ್ 5 ರನ್ ಗೆ ಕುಲದೀಪ್ ಬೌಲಿಂಗ್ ನಲ್ಲಿ ಎಲ್ ಬಿ ಡಬ್ಲೂ ಆದರು. ತಂಡದ ಪರ ಅತ್ಯುತ್ತಮ ಪ್ರದರ್ಶನ ನೀಡಿದ ಡ್ಯಾರಿಲ್ ಮಿಚೆಲ್ 9 ಬೌಂಡರಿ 5 ಸಿಕ್ಸರ್ ನೆರವಿನಿಂದ 130 ಬಾರಿಸಿದರು. ಗ್ಲೆನ್ ಫಿಲಿಪ್ಸ್ 23, ಮಾರ್ಕ್ ಚಾಪ್ಮನ್ 6, ಮಿಷೆಲ್ ಸಾಂಟ್ನರ್ 1, ಮ್ಯಾಟ್ ಹೆನ್ರಿ 0, ಲೋಕಿ ಫರ್ಗುಸನ್ 1 ರನ್ ಗಳಿಸಿದರು.
ಭಾರತದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮುಹಮ್ಮದ್ ಶಮಿ 5 ವಿಕೆಟ್ ಪಡೆದರೆ ಕುಲದೀಪ್ ಯಾದವ್ 2 ವಿಕೆಟ್, ಬೂಮ್ರ, ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.