ಮುಹಮ್ಮದ್ ಶಮಿ ತಕ್ಷಣಕ್ಕೆ ಆಸ್ಟ್ರೇಲಿಯ ಪ್ರವಾಸ ಸಾಧ್ಯತೆ ಇಲ್ಲ : ವರದಿ
ಹೊಸದಿಲ್ಲಿ : ಭಾರತದ ಪ್ರಮುಖ ವೇಗದ ಬೌಲರ್ ಮುಹಮ್ಮದ್ ಶಮಿ ಅವರು ನ್ಯಾಶನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ)ಯಿಂದ ಇನ್ನಷ್ಟೇ ಫಿಟ್ನೆಸ್ ಕ್ಲಿಯರೆನ್ಸ್ ಪಡೆಯಬೇಕಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಕ್ಕೆ ತಕ್ಷಣ ಪ್ರಯಾಣಿಸುವ ಸಾಧ್ಯತೆ ಇಲ್ಲ ಎಂದು ಕ್ರಿಕ್‌ಬಝ್ ವರದಿ ಮಾಡಿದೆ.
ಆಸ್ಟ್ರೇಲಿಯದಲ್ಲಿ ಈಗ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಶಮಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದ್ದರೂ 34ರ ಹರೆಯದ ಶಮಿ ಅವರನ್ನು ಆಸ್ಟ್ರೇಲಿಯಕ್ಕೆ ಕಳುಹಿಸಿಕೊಡುವ ಬಗ್ಗೆ ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ.
ಬಿಸಿಸಿಐನ ಬೆಂಗಳೂರು ಮೂಲದ ಸೆಂಟರ್ ಫಾರ್ ಎಕ್ಸೆಲೆನ್ಸ್‌ನ ಕ್ರೀಡಾ ವಿಜ್ಞಾನ ವಿಭಾಗವು ಶಮಿ ಅವರ ಫಿಟ್ನೆಸ್ ಕುರಿತು ನಿರಂತರ ನಿಗಾವಹಿಸಿದ್ದು, ಅದು ಇನ್ನಷ್ಟೇ ತನ್ನ ಅಂತಿಮ ವರದಿಯನ್ನು ಸಲ್ಲಿಸಬೇಕಾಗಿದೆ.
ರಾಷ್ಟ್ರೀಯ ಆಯ್ಕೆಗಾರ ಎಸ್.ಎಸ್. ದಾಸ್, ಬಿಸಿಸಿಐನ ಸ್ಪೋರ್ಟ್ಸ್‌ಸೈನ್ಸ್ ಮುಖ್ಯಸ್ಥ ನಿತಿನ್ ಪಟೇಲ್ ಹಾಗೂ ಸ್ಟ್ರೆಂತ್ ಹಾಗೂ ಕಂಡೀಶನಿಂಗ್ ಟ್ರೈನರ್ ನಿಶಾಂತ್ ಬರ್ದುಲ್ ಈ ಹಿಂದೆ ರಾಜ್‌ಕೋಟ್‌ಗೆ ಪ್ರಯಾಣಿಸಿ ಈಗ ನಡೆಯುತ್ತಿರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಶಮಿ ಅವರ ಪ್ರದರ್ಶನವನ್ನು ಗಮನಿಸಿದ್ದರು.
ಟಿ20 ಟೂರ್ನಿಯಲ್ಲಿ ಬಂಗಾಳವನ್ನು ಪ್ರತಿನಿಧಿಸಿರುವ ವೇಗದ ಬೌಲರ್ ಶಮಿ ಅವರು 7 ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಪಡೆದಿದ್ದಾರೆ. ಬಂಗಾಳ ತಂಡ ಪ್ರಿ-ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿರುವ ಕಾರಣ ಶಮಿ ಸದ್ಯ ಅದೇ ತಂಡದಲ್ಲಿದ್ದಾರೆ.
ಸೌದಿ ಅರೇಬಿಯದ ಜಿದ್ದಾದಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಶಮಿ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 10 ಕೋಟಿ ರೂ.ಗೆ ಖರೀದಿಸಿತ್ತು.