ಪಾಕಿಸ್ತಾನಕ್ಕೆ ಭಾರತೀಯ ಡೇವಿಸ್ ಕಪ್ ತಂಡದ ಪ್ರಯಾಣ ; ಕ್ರೀಡಾ ಸಚಿವಾಲಯದ ಸಲಹೆ ಕೇಳಿದ ಎಐಟಿಎ

Update: 2023-12-27 18:30 GMT

ಹೊಸದಿಲ್ಲಿ : ಪಾಕಿಸ್ತಾನದ ವಿರುದ್ಧ ಡೇವಿಸ್ ಕಪ್ ವರ್ಲ್ಡ್ ಗ್ರೂಪ್ ವನ್ ಪ್ಲೇ-ಆಫ್ ಪಂದ್ಯಗಳಲ್ಲಿ ಆಡಲು ಭಾರತ ನೆರೆಯ ದೇಶಕ್ಕೆ ಹೋಗುವ ವಿಷಯದಲ್ಲಿ ಅಖಿಲ ಭಾರತ ಟೆನಿಸ್ ಅಸೋಸಿಯೇಶನ್ (ಎಐಟಿಎ) ಮಂಗಳವಾರ ಕ್ರೀಡಾ ಸಚಿವಾಲಯದ ಸಲಹೆಯನ್ನು ಕೋರಿದೆ.

ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯಗಳು ಮುಂದಿನ ವರ್ಷದ ಫೆಬ್ರವರಿ 3 ಮತ್ತು 4ರಂದು ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನ್ ಸ್ಪೋಟ್ರ್ಸ್ ಕಾಂಪ್ಲೆಕ್ಸ್ನಲ್ಲಿ ನಡೆಯಲಿದೆ.

ಡೇವಿಸ್ ಕಪ್ ಪ್ಲೇ-ಆಫ್ ಪಂದ್ಯಗಳನ್ನು ತಟಸ್ಥ ಸ್ಥಳವೊಂದಕ್ಕೆ ವರ್ಗಾಯಿಸುವಂತೆ ಕೋರುವ ಎಐಟಿಎ ಮನವಿಯನ್ನು ಅಂತರ್ರಾಷ್ಟ್ರೀಯ ಟೆನಿಸ್ ಫೆಡರೇಶನ್ ನ್ಯಾಯಮಂಡಳಿಯು ತಿರಸ್ಕರಿಸಿದ ಬಳಿಕ ಈ ಬೆಳವಣಗೆ ನಡೆದಿದೆ.

“ಪಾಕಿಸ್ತಾನಕ್ಕೆ ಪ್ರಯಾಣಿಸುವುದಕ್ಕೆ ಸಂಬಂಧಿಸಿದ ನೀತಿ ಏನು ಎಂಬ ವಿಷಯದಲ್ಲಿ ನಾವು ಕ್ರೀಡಾ ಸಚಿವಾಲಯದ ಸಲಹೆಯನ್ನು ಕೋರಿದ್ದೇವೆ. ಡೇವಿಸ್ ಕಪ್ ಟೆನಿಸ್ನ ವಿಶ್ವಕಪ್ ಇದ್ದಂತೆ. ನಾವು ಕ್ರೀಡಾ ಸಚಿವಾಲಯದ ಉತ್ತರಕ್ಕಾಗಿ ಕಾಯುತ್ತಿದ್ದೇವೆ’’ ಎಂದು ಎಐಟಿಎ ಮಹಾಕಾರ್ಯದರ್ಶಿ ಅನಿಲ್ ದೂಪರ್ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.

ಇದಕ್ಕೂ ಮೊದಲು, ಡೇವಿಸ್ ಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನಗಳು ಮುಖಾಮುಖಿಯಾಗಿದ್ದು 2019ರಲ್ಲಿ. ಆ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಬೇಕಾಗಿದ್ದವು. ಯಾಕೆಂದರೆ, ಅದಕ್ಕೂ ಹಿಂದಿನ ಮುಖಾಮುಖಿ 2006ರಲ್ಲಿ ಮುಂಬೈಯಲ್ಲಿ ನಡೆದಿತ್ತು.

ಆದರೆ, 2019ರಲ್ಲಿ ಆ ಪಂದ್ಯಗಳನ್ನು ತಟಸ್ಥ ಸ್ಥಳ ಕಝಖ್ಸ್ತಾನಕ್ಕೆ ವರ್ಗಾಯಿಸುವಲ್ಲಿ ಎಐಟಿಎ ಯಶಸ್ವಿಯಾಗಿತ್ತು. ಎರಡು ದೇಶಗಳ ನಡುವೆ ರಾಜಕೀಯ ಉದ್ವಿಗ್ನತೆ ನೆಲೆಸಿದೆ ಎಂಬ ಆಧಾರದಲ್ಲಿ ಪಂದ್ಯಗಳನ್ನು ವರ್ಗಾಯಿಸುವಲ್ಲಿ ಅದು ಸಫಲವಾಗಿತ್ತು.

ಭಾರತೀಯ ಡೇವಿಸ್ ಕಪ್ ತಂಡವು ಕೊನೆಯ ಬಾರಿ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು 1964ರಲ್ಲಿ. ಲಾಹೋರ್ನಲ್ಲಿ ನಡೆದ ಪಂದ್ಯಗಳನ್ನು ಭಾರತದ ಅಖ್ತರ್ ಅಲಿ, ಪ್ರೇಮ್ಜಿತ್ ಲಾಲ್ ಮತ್ತು ಎಸ್.ಪಿ. ಮಿಶ್ರಾ 4-0 ಅಂತರದಿಂದ ಗೆದ್ದಿದ್ದರು.

ಭಾರತೀಯ ಕ್ರಿಕೆಟ್ ತಂಡವು ಕೊನೆಯ ಬಾರಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಿದ್ದು 2006ರಲ್ಲಿ. ಆದರೆ ಆ ಬಳಿಕ ನೆರೆಯ ದೇಶಗಳು ರಾಜತಾಂತ್ರಿಕ ಉದ್ವಿಗ್ನತೆಗಳ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News