ಆಲಿಂಗಿಸಲು ಬಂದ ಮಾಲಿಂಗರನ್ನು ತಳ್ಳಿ ಮುಂದೆ ಹೋದ ಪಾಂಡ್ಯ!
ಹೈದರಾಬಾದ್: 2024ರ ಋತುವಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಮೊದಲ ಎರಡೂ ಪಂದ್ಯಗಳನ್ನು ಸೋತಿದೆ. ಆದರೆ, ತಂಡದ ನಿರ್ವಹಣೆಗಿಂತಲೂ ಹೆಚ್ಚು, ತಂಡದ ಅಭಿಮಾನಿಗಳು ಮೈದಾನ ಮತ್ತು ಅದರ ಸುತ್ತಮುತ್ತ ನಾಯಕನ ವರ್ತನೆಗಳ ಮೇಲೆ ನಿಗಾ ಇಟ್ಟಿದ್ದಾರೆ. ತಂಡದ ಅಭಿಮಾನಿಗಳು ನಾಯಕನನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸುತ್ತಿದ್ದಾರೆ.
ಬುಧವಾರ ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 31 ರನ್‌ಗಳ ಸೋಲನುಭವಿಸಿದೆ. ಪಂದ್ಯದ ಬಳಿಕ, ತನ್ನ ಬಳಿಗೆ ಬಂದ ತಂಡದ ಬೌಲಿಂಗ್ ಕೋಚ್ ಲಸಿತ್ ಮಲಿಂಗರನ್ನು ಹಾರ್ದಿಕ್ ಪಾಂಡ್ಯ ದೂರಕ್ಕೆ ತಳ್ಳುವುದನ್ನು ತೋರಿಸುವ ವೀಡಿಯೊವೊಂದು ಈಗ ವೈರಲ್ ಆಗಿದೆ. ಈಗ ಅದಕ್ಕಾಗಿ ಮುಂಬೈ ಇಂಡಿಯನ್ಸ್ ನಾಯಕ ಹೊಸದಾಗಿ ಟೀಕೆಗೆ ಗುರಿಯಾಗಿದ್ದಾರೆ.
ಪಂದ್ಯದ ಬಳಿಕ ತನ್ನನ್ನು ಆಲಿಂಗಿಸಲು ಬಂದ ಮಾಲಿಂಗರನ್ನು ತಳ್ಳಿ ಪಾಂಡ್ಯ ಮುಂದಕ್ಕೆ ಹೋಗುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಈ ಬಾರಿಯ ಐಪಿಎಲ್‌ಗೆ ಮುನ್ನ, ತಂಡದ ನಾಯಕತ್ವವನ್ನು ಐದು ಬಾರಿಯ ಪ್ರಶಸ್ತಿ ವಿಜೇತ ನಾಯಕ ರೋಹಿತ್ ಶರ್ಮರಿಂದ ಹಾರ್ದಿಕ್‌ಗೆ ಹಸ್ತಾಂತರಿಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿತ್ತು. ಅದಕ್ಕಾಗಿ ಗುಜರಾತ್ ಟೈಟಾನ್ಸ್‌ನಲ್ಲಿದ್ದ ಪಾಂಡ್ಯರನ್ನು ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಳಿಸಲಾಗಿತ್ತು. ಆ ಘೋಷಣೆಯ ಬಳಿಕ, ಹಾರ್ದಿಕ್ ತಂಡದ ಅಭಿಮಾನಿಗಳ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಪ್ರೇಕ್ಷಕರು ಅವರನ್ನು ಹೋದಲ್ಲಿ ಬಂದಲ್ಲಿ ಗೇಲಿ ಮಾಡುತ್ತಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ತನ್ನ ಐಪಿಎಲ್ ಮೊದಲ ಪಂದ್ಯವನ್ನು ಮುಂಬೈ ಇಂಡಿಯನ್ಸ್ ಸೋತಿತ್ತು. ಬಳಿಕ, ಹೈದರಾಬಾದ್‌ನಲ್ಲಿ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯವನ್ನೂ ಕಳೆದುಕೊಂಡಿತು.
ಇಷ್ಟೇ ಅಲ್ಲ, ಇನ್ನೊಂದು ಹಾರ್ದಿಕ್ ಮತ್ತು ಮಾಲಿಂಗರನ್ನು ಒಳಗೊಂಡ ಇನ್ನೊಂದು ವೀಡಿಯೊ ಕೂಡ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಸನ್‌ರೈಸರ್ಸ್ ವಿರುದ್ಧದ ಪಂದ್ಯ ನಡೆಯುತ್ತಿರುವಾಗ ತಂಡದ ಕ್ಯಾಬಿನ್‌ನಲ್ಲಿ ಮಾಲಿಂಗ ಸಹಾಯಕ ಕೋಚ್ ಕೀರೊನ್ ಪೊಲಾರ್ಡ್ ಜೊತೆ ಕೂತಿದ್ದರು. ಆಗ ಮುಂದಿನ ಬ್ಯಾಟರ್ ಆಗಿ ಪ್ಯಾಡ್ ಕಟ್ಟಿ ಬಂದ ಪಾಂಡ್ಯ ಕುಳಿತುಕೊಳ್ಳುವುದಕ್ಕಾಗಿ ಮಾಲಿಂಗ ತನ್ನ ಆಸನ ಬಿಟ್ಟು ಎದ್ದರು. ಹಾರ್ದಿಕ್‌ಗೆ ಆಸನ ಬಿಟ್ಟುಕೊಡಲು ಪೊಲಾರ್ಡ್ ಏಳುವವರಿದ್ದರು. ಆದರೆ ಮಾಲಿಂಗರೇ ಎದ್ದು ದೂರ ಹೋದರು.
ಈ ಘಟನೆಯೂ ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.