ರಣಜಿ ಟ್ರೋಫಿ | ಬಂಗಾಳದ ವಿರುದ್ಧ ಮುಹಮ್ಮದ್ ಶಮಿ ಆಡುವ ಸಾಧ್ಯತೆ
ಕೋಲ್ಕತಾ : ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಪುನಶ್ಚೇತನ ಪ್ರಕ್ರಿಯೆಯಲ್ಲಿದ್ದ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ರಣಜಿ ಟ್ರೋಫಿಯಲ್ಲಿ ಬಂಗಾಳದ ಪರ ಆಡುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟಿಗೆ ಪುನರಾಗಮನವಾಗುವ ಸಾಧ್ಯತೆಯಿದೆ. ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತದ ಪರ ಒಂದು ಪಂದ್ಯದಲ್ಲಿ ಆಡುವ ನಿರೀಕ್ಷೆ ಇದೆ.
ಅಕ್ಟೋಬರ್ 11ರಂದು ಉತ್ತರ ಪ್ರದೇಶ ವಿರುದ್ಧ ಹಾಗೂ ಅಕ್ಟೋಬರ್ 18ರಂದು ಬಿಹಾರದ ವಿರುದ್ಧ ಬಂಗಾಳ ಆಡಲಿರುವ ಎರಡೂ ಅಥವಾ ಒಂದು ರಣಜಿ ಪಂದ್ಯದಲ್ಲಿ ಶಮಿ ಆಡುವ ಸಾಧ್ಯತೆಯಿದೆ.
ಈ ಎರಡು ಪಂದ್ಯಗಳ ನಡುವೆ ಒಂದು ಅಥವಾ ಎರಡು ದಿನ ಅಂತರ ಇರುವ ಕಾರಣ ಶಮಿ ಎರಡೂ ಪಂದ್ಯಗಳಲ್ಲಿ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ.
ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯು ಅಕ್ಟೋಬರ್ 19ರಂದು ಬೆಂಗಳೂರಿನಲ್ಲಿ ಆರಂಭವಾಗಲಿದೆ. ಆ ನಂತರ ಪುಣೆ(ಅಕ್ಟೋಬರ್ 24) ಹಾಗೂ ಮುಂಬೈ(ನವೆಂಬರ್1)ನಲ್ಲಿ ಇನ್ನೆರಡು ಪಂದ್ಯಗಳು ನಡೆಯುತ್ತವೆ.
ಆಸ್ಟ್ರೇಲಿಯ ವಿರುದ್ಧ ಐದು ಪಂದ್ಯಗಳ ಸರಣಿಗೆ ಸಜ್ಜಾಗುವ ಮೊದಲು ಶಮಿ ಅವರು ಕಿವೀಸ್ ವಿರುದ್ದ 3 ಟೆಸ್ಟ್ ಪಂದ್ಯಗಳಲ್ಲಿ ಒಂದರಲ್ಲಿ ಆಡುವ ಸಾಧ್ಯತೆಯಿದೆ.
34ರ ಹರೆಯದ ಶಮಿ ಕಳೆದ ವರ್ಷ ನವೆಂಬರ್ 19ರಂದು ಆಸ್ಟ್ರೇಲಿಯದ ವಿರುದ್ಧ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಕೊನೆಯ ಬಾರಿ ಟೀಮ್ ಇಂಡಿಯಾದ ಜರ್ಸಿ ಧರಿಸಿದ್ದರು. ಆ ನಂತರ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡದ ಶಮಿ ಈ ವರ್ಷದ ಫೆಬ್ರವರಿಯಲ್ಲಿ ಬ್ರಿಟನ್ ನಲ್ಲಿ ಪಾದದ ಸರ್ಜರಿಗೆ ಒಳಗಾಗಿದ್ದರು.
ಶಮಿ ಅವರು ದುಲೀಪ್ ಟ್ರೋಫಿಗೆ ಫಿಟ್ ಇರುವ ಸಾಧ್ಯತೆಯಿಲ್ಲ. ಆಯ್ಕೆ ಸಮಿತಿಯು ಶಮಿ ಅವರನ್ನು ಬೇಗನೆ ಆಡಿಸುವ ಸಾಧ್ಯತೆಯೂ ಇಲ್ಲ. ಆಸ್ಟ್ರೇಲಿಯ ವಿರುದ್ದ ಪ್ರಮುಖ ಸರಣಿಗೂ ಮೊದಲು ಭಾರತದ ಅಗ್ರ ಮೂರು ವೇಗಿಗಳಾದ ಜಸ್ಪ್ರಿತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ಫಿಟ್ ಇರುವುದು ಮುಖ್ಯವಾಗಿದೆ.
ಶಮಿ ಅವರು 64 ಟೆಸ್ಟ್ ಪಂದ್ಯಗಳಲ್ಲಿ ಆರು ಬಾರಿ 5 ವಿಕೆಟ್ ಗೊಂಚಲು ಹಾಗೂ 12 ಬಾರಿ ನಾಲ್ಕು ವಿಕೆಟ್ ಗೊಂಚಲು ಸಹಿತ ಒಟ್ಟು 229 ವಿಕೆಟ್ ಗಳನ್ನು ಉರುಳಿಸಿದ್ದಾರೆ.