ವಿಂಬಲ್ಡನ್ ನಲ್ಲಿ ಬೊಬ್ಬೆ ಹಾಕುತ್ತಿದ್ದ ಪ್ರೇಕ್ಷಕರಿಗೆ ಎಚ್ಚರಿಕೆ ರವಾನಿಸಿದ ನೊವಾಕ್ ಜೊಕೊವಿಕ್

Update: 2023-07-07 18:10 GMT

ನೊವಾಕ್ ಜೊಕೊವಿಕ್ | Photo: PTI

ಲಂಡನ್: ವಿಶ್ವದ ಖ್ಯಾತ ಆಟಗಾರ ನೊವಾಕ್ ಜೊಕೊವಿಕ್ ಟೆನಿಸ್ ಇತಿಹಾಸದಲ್ಲಿ ಅತ್ಯಂತ ನಿಪುಣ ಹಾಗೂ ಯಶಸ್ವಿ ಆಟಗಾರರಲ್ಲಿ ಒಬ್ಬರಾಗಿದ್ದರೂ, ಪ್ರಪಂಚದಾದ್ಯಂತದ ಪ್ರೇಕ್ಷಕರೊಂದಿಗೆ ಅವರ ಸಂಬಂಧವು ಎಂದಿಗೂ ಉತ್ತಮವಾಗಿಲ್ಲ. ವಿಂಬಲ್ಡನ್ ನಲ್ಲಿ ಸತತ ನಾಲ್ಕು ಪ್ರಶಸ್ತಿ ಜಯಿಸಿರುವ ಸರ್ಬಿಯದ ಆಟಗಾರ ನೊವಾಕ್ ಜೊಕೊವಿಕ್ ಈ ವರ್ಷ ಅವರು ಆಡಿರುವ ಮೊದಲ ಎರಡು ಪಂದ್ಯಗಳಲ್ಲಿ ಪ್ರೇಕ್ಷಕರಿಂದ ಕುಚೇಷ್ಟೆ ಎದುರಿಸಿದ್ದಾರೆ. ಇದರಿಂದ ಜೊಕೊವಿಕ್ ಅಸಮಾಧಾನಗೊಂಡಿದ್ದಾರೆ. ತಾನಾಡಿದ ಮೊದಲ ಎರಡು ಪಂದ್ಯಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಪ್ರೇಕ್ಷಕರಿಗೆ ಜೊಕೊವಿಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಬುಧವಾರ, ಜೊಕೊವಿಕ್ ವಿಂಬಲ್ಡನ್ ಎರಡನೇ ಸುತ್ತಿನಲ್ಲಿ ಜೋರ್ಡಾನ್ ಥಾಂಪ್ಸನ್ ಅವರನ್ನು 6-3 7-6 (4) 7-5 ರಿಂದ ಸೋಲಿಸಿದರು. ಪಂದ್ಯದುದ್ದಕ್ಕೂ, ಜೊಕೊವಿಕ್ ಜನಸಮೂಹದಿಂದ ಬೊಬ್ಬೆಯನ್ನು ಕೇಳುವಂತಾಯಿತು.

ವಿಂಬಲ್ಡನ್ ಟೂರ್ನಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಕ್ರಮವಾಗಿ ಪೆಡ್ರೊ ಕ್ಯಾಚಿನ್ ಹಾಗೂ ಜೋರ್ಡಾನ್ ಥಾಂಪ್ಸನ್ ವಿರುದ್ಧ ನೇರ ಸೆಟ್ ಜಯ ಗಳಿಸಿದರೂ ಅವರ ಪಯಣದ ಹಾದಿ ಸುಲಭ ವಾಗಿರಲಿಲ್ಲ. ಆಸ್ಟ್ರೇಲಿಯನದ ಥಾಂಪ್ಸನ್ ವಿರುದ್ಧದ ಪಂದ್ಯದ ಸಮಯದಲ್ಲಿ, ಸೆಂಟರ್ ಕೋರ್ಟ್ ನಲ್ಲಿದ್ದ ಹೆಚ್ಚಿನ ಪ್ರೇಕ್ಷಕರು ಥಾಂಪ್ಸನ್ ಗೆಲುವಿಗಾಗಿ ಹುರಿದುಂಬಿಸುತ್ತಿದ್ದರಿಂದ ಜೊಕೊವಿಕ್ ಸ್ವಲ್ಪ ವಿಚಲಿತರಾದರು.

ಜೊಕೊವಿಕ್ ತನ್ನ ವೃತ್ತಿಜೀವನದುದ್ದಕ್ಕೂ ಪ್ರೇಕ್ಷಕರಿಂದ ಇಂತಹ ವರ್ತನೆಯನ್ನು ಎದುರಿಸುತ್ತಾ ಬಂದಿದ್ದು ಅದು ಅವರಿಗೆ ಹೊಸದೇನಲ್ಲ, ಆದರೂ ಅವರು ಅಸಮಾಧಾನಗೊಂಡಿದ್ದು, ತನ್ನ ವಿರುದ್ಧ ಬೊಬ್ಬೆ ಹಾಕುವುದನ್ನು "ಸ್ವೀಕರಿಸಲು ಕಷ್ಟ" ಎಂಬ ಮನಸ್ಥಿತಿಗೆ ತಲುಪಿದ್ದಾರೆ. ಅಂತಿಮವಾಗಿ ಪಂದ್ಯದ ಕೊನೆಯಲ್ಲಿ ಅವರು ಪ್ರೇಕ್ಷಕರಿಗೆ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ.

"ನನ್ನ ವಿರುದ್ಧ ಬೊಬ್ಬೆಹಾಕುತ್ತಿರುವ ಪ್ರೇಕ್ಷಕರು ನಿಜವಾಗಿಯೂ ನನಗೆ ಸಹಾಯ ಮಾಡುತ್ತಿದ್ದಾರೆ. ಅವರು ನನ್ನ ವಿರುದ್ಧ ಹೆಚ್ಚು ಬೊಬ್ಬೆ ಹಾಕಿದ್ದಷ್ಟೂ ನಾನು ಉತ್ತಮವಾಗಿದ್ದೇನೆ. ಒಬ್ಬ ಆಟಗಾರನಾಗಿ ನಿಮ್ಮ ಪರ ಹೆಚ್ಚಿನ ಪ್ರೇಕ್ಷಕರನ್ನು ಹೊಂದಲು ಬಯಸುತ್ತೀರಿ, ನಾನು ಯುದ್ಧದ ವಾತಾವರಣದಲ್ಲಿ ಆಡಲು ಬಯಸುವುದಿಲ್ಲ ಎಂದು ಸರ್ಬಿಯದ ಮಾಧ್ಯಮಕ್ಕೆ ಜೊಕೊವಿಕ್ ತಿಳಿಸಿದರು.

ಆದರೆ, ನನ್ನ ವೃತ್ತಿಜೀವನದ ಬಹುತೇಕ ಪಂದ್ಯಗಳಲ್ಲಿ ಪ್ರೇಕ್ಷಕರು ಮತ್ತೊಬ್ಬರನ್ನು ಹುರಿದುಂಬಿಸುತ್ತಾರೆ. ಇದು ಅದೃಷ್ಟದಿಂದ ನಿರ್ಧರಿಸಲ್ಪಟ್ಟಿದೆ ಆದರೆ , ಕೆಲವೊಮ್ಮೆ ಅದನ್ನು ಒಪ್ಪಿಕೊಳ್ಳಲು ನನಗೆ ಕಷ್ಟವಾಗುತ್ತದೆ, ಕೆಲವೊಮ್ಮೆ ಪ್ರೇಕ್ಷಕರು ಹಾಗೂ ನಡವಳಿಕೆಯನ್ನು ನಾನು ಅರ್ಥಮಾಡಿಕೊಳ್ಳುವುದಿಲ್ಲ, ಆದರೆ ಅವರಿಗೆ ಪ್ರತಿಸ್ಪರ್ಧಿಗೆ ಹುರಿದುಂಬಿಸುವ ಹಕ್ಕಿದೆ ಎಂದರು.

" ಪ್ರಪಂಚದಾದ್ಯಂತದ ಪ್ರಮುಖ ಪಂದ್ಯಾವಳಿಗಳಲ್ಲಿ ಈ ರೀತಿ ಆಗಿದೆ.. ಇದು ನನಗೆ ಉತ್ತೇಜನದ ಜೊತೆಗೆ ಹೆಚ್ಚುವರಿ ಪ್ರೇರಣೆ ನೀಡುತ್ತಿದೆ, ಇದು ನನಗೆ ಇನ್ನೂ ಉತ್ತಮವಾಗಿ ಆಡಲು ಸ್ಫೂರ್ತಿ ನೀಡುತ್ತದ’’ ಎಂದು ಜೊಕೊವಿಕ್ ಹೇಳಿದ್ದಾರೆ.

ಜೊಕೊವಿಕ್ ಶುಕ್ರವಾರ ನಡೆಯಲಿರುವ ಮೂರನೇ ಸುತ್ತಿನಲ್ಲಿ ಪರಿಚಿತ ಪ್ರತಿಸ್ಪರ್ಧಿ ಸ್ಟಾನ್ ವಾವ್ರಿಂಕಾ ಅವರನ್ನು ಎದುರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News