ಕಡಿಮೆ ಮೊತ್ತಕ್ಕೆ ಔಟ್: ಬ್ಯಾಟ್ ಬಡಿದು ಆಕ್ರೋಶ ಹೊರಹಾಕಿದ ರಿಷಭ್ ಪಂತ್
ಹೊಸದಿಲ್ಲಿ: ಈ ವರ್ಷದ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸತತ 2ನೇ ಬಾರಿ ಸೋತಿದೆ. ಇದರಿಂದ ನಾಯಕ ರಿಷಭ್ ಪಂತ್ ಆಕ್ರೋಶಿತರಾಗಿದ್ದು, ಗುರುವಾರ ರಾಜಸ್ಥಾನ ರಾಯಲ್ಸ್ ವಿರುದ್ದ ಔಟಾದ ನಂತರ ಅವರ ವರ್ತನೆ ಇದಕ್ಕೆ ಸಾಕ್ಷಿಯಾಗಿದೆ.
ರಾಜಸ್ಥಾನ ತಂಡ ಕೊನೆಯ ಓವರ್ನಲ್ಲಿ 12 ರನ್ನಿಂದ ಡೆಲ್ಲಿ ತಂಡವನ್ನು ಸೋಲಿಸಿ ಸತತ 2ನೇ ಗೆಲುವು ದಾಖಲಿಸಿದೆ. 2022ರ ಡಿಸೆಂಬರ್ನಲ್ಲಿ ನಡೆದ ಭೀಕರ ಕಾರು ಅಪಘಾತದ ನಂತರ ಸ್ಪರ್ಧಾತ್ಮಕ ಕ್ರಿಕೆಟ್ ಗೆ ವಾಪಸಾಗಿರುವ ಪಂತ್ ಗೆ ಡೆಲ್ಲಿ ತಂಡದ ಸತತ ಸೋಲು ಭಾರೀ ನಿರಾಸೆವುಂಟು ಮಾಡಿದೆ.
ಗೆಲ್ಲಲು 186 ರನ್ ಸವಾಲಿನ ಮೊತ್ತ ಬೆನ್ನಟ್ಟಿದ ಡೆಲ್ಲಿ ತಂಡದ ಪರ ನಾಯಕ ಪಂತ್ 26 ಎಸೆತಗಳಲ್ಲಿ 28 ರನ್ ಗಳಿಸಿದರು. ಇದು ಅವರ ಮೇಲೆ ಒತ್ತಡ ವುಂಟು ಮಾಡಿದೆ. ಒತ್ತಡದಿಂದ ಹೊರ ಬರಲು ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಾಲ್ ಎಸೆತವನ್ನು ಕೆಣಕಲು ಹೋದ ಪಂತ್ ವಿಕೆಟ್ಕೀಪರ್ ಸಂಜು ಸ್ಯಾಮ್ಸನ್ ಗೆ ಕ್ಯಾಚ್ ನೀಡಿದರು.
ಪಂತ್ ನಿರ್ಗಮನದ ನಂತರ ರಾಜಸ್ಥಾನ ಪಂದ್ಯದ ಮೇಲೆ ಮತ್ತಷ್ಟು ಹಿಡಿತ ಸಾಧಿಸಿತು. ತನ್ನ ತಾಳ್ಮೆಯನ್ನು ಕಳೆದುಕೊಂಡ ಪಂತ್ ಡ್ರೆಸ್ಸಿಂಗ್ ರೂಮ್ಗೆ ತೆರಳುವ ಹಾದಿಯಲ್ಲಿ ತನ್ನ ಬ್ಯಾಟನ್ನು ಗೋಡೆಯನ್ನು ಬಡಿದರು.
ಡೆಲ್ಲಿ ತಂಡ ಮಾರ್ಚ್ 31ರಂದು ಹಾಲಿ ಚಾಂಪಿಯನ್ ಚೆನ್ನೈ ತಂಡವನ್ನು ಎದುರಿಸಲಿದೆ.