ಅಂಧರ ಟಿ20 ವಿಶ್ವಕಪ್ ಪ್ರಶಸ್ತಿ ಎತ್ತಿ ಹಿಡಿದ ಪಾಕಿಸ್ತಾನ ಕ್ರಿಕೆಟ್ ತಂಡ

Update: 2024-12-03 15:22 GMT

PC : X 

ಮುಲ್ತಾನ್: ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 10 ವಿಕೆಟ್‌ಗಳ ಅಂತರದಿಂದ ಮಣಿಸಿದ ಆತಿಥೇಯ ಪಾಕಿಸ್ತಾನ ತಂಡವು ಅಂಧರ ಟಿ-20 ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿದೆ.

ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 139 ರನ್ ಗಳಿಸಿತು. ಆರಿಫ್ ಹುಸೈನ್(54 ರನ್, 52 ಎಸೆತ)ಅಗ್ರ ಸ್ಕೋರರ್ ಎನಿಸಿಕೊಂಡರು. ಪಾಕಿಸ್ತಾನದ ಬಾಬರ್ ಅಲಿ ತನ್ನ 4 ಓವರ್‌ಗಳ ಬೌಲಿಂಗ್‌ನಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದರು.

ಗೆಲ್ಲಲು 140 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡವು ವಿಕೆಟ್ ಕಳೆದುಕೊಳ್ಳದೆ ಕೇವಲ 11 ಓವರ್‌ಗಳಲ್ಲಿ ಗುರಿ ತಲುಪಿತು.

ನಾಯಕ ನಿಸಾರ್ ಅಲಿ ಕೇವಲ 31 ಎಸೆತಗಳಲ್ಲಿ ಔಟಾಗದೆ 72 ರನ್ ಗಳಿಸಿದರೆ, ಮುಹಮ್ಮದ್ ಸಫ್ದರ್ ಔಟಾಗದೆ 47 ರನ್ ಗಳಿಸಿ ತನ್ನ ನಾಯಕನಿಗೆ ಉತ್ತಮ ಸಾಥ್ ನೀಡಿದರು. ಈ ಗೆಲುವಿನ ಮೂಲಕ ಪಾಕಿಸ್ತಾನವು ಪಂದ್ಯಾವಳಿಯುದ್ದಕ್ಕೂ ಅಜೇಯ ಗೆಲುವಿನ ದಾಖಲೆ ಕಾಯ್ದುಕೊಂಡಿದೆ.

ಈ ಮಹತ್ವದ ಸಾಧನೆಗೆ ಪಾಕಿಸ್ತಾನ ಅಂಧರ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸಯ್ಯದ್ ಸುಲ್ತಾನ್ ಶಾ ಅವರು ತಂಡ ಹಾಗೂ ದೇಶಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಗೆಲುವಿನ ಮೂಲಕ ಪಾಕಿಸ್ತಾನವು ಅಂಧರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪ್ರಾಬಲ್ಯವನ್ನು ಮುರಿದಿದೆ. ಭಾರತವು 2012,2017 ಹಾಗೂ 2022ರಲ್ಲಿ ನಡೆದ ಹಿಂದಿನ ಮೂರೂ ಆವೃತ್ತಿಗಳಲ್ಲಿ ಪ್ರಶಸ್ತಿ ಜಯಿಸಿತ್ತು. ಪ್ರತಿ ಬಾರಿಯೂ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿತ್ತು. ಆದರೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ರಾಜಕೀಯ ಹಾಗೂ ಭದ್ರತಾ ಕಳವಳವನ್ನು ಮುಂದಿಟ್ಟು 2024ರ ಆವೃತ್ತಿಯ ಟೂರ್ನಿಯಿಂದ ಭಾರತ ತಂಡವು ಹಿಂದೆ ಸರಿದಿತ್ತು.

ಸೆಮಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ನೇಪಾಳ ತಂಡವನ್ನು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 94 ರನ್‌ಗೆ ನಿಯಂತ್ರಿಸಿತು. ಈ ಮೂಲಕ ಸುಲಭವಾಗಿ ಫೈನಲ್‌ನಲ್ಲಿ ಸ್ಥಾನ ಪಡೆಯಿತು. ತೀವ್ರ ಪೈಪೋಟಿಯಿಂದ ಕೂಡಿದ್ದ ಮತ್ತೊಂದು ಸೆಮಿ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ತಂಡವನ್ನು 6 ರನ್‌ಗಳಿಂದ ರೋಚಕವಾಗಿ ಮಣಿಸಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News