ವಿಶ್ವಕಪ್ ನಿಂದ ಪಾಕಿಸ್ತಾನ ನಿರ್ಗಮನ
ಕೋಲ್ಕತಾ: ಇಲ್ಲಿನ ಈಡೆನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ದ 93 ರನ್ ಗಳ ಜಯ ಸಾಧಿಸಿದೆ.
ಜಾನಿ ಬೈರ್ ಸ್ಟೋ , ಜೋ ರೂಟ್ ಹಾಗೂ ಬೆನ್ ಸ್ಟೋಕ್ಸ್ ರವರ ತ್ರಿವಳಿ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ತಂಡ 337 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು. ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 43.3 ಓವರ್ ಗಳಲ್ಲಿ 244 ರನ್ ಗೆ ಆಲೌಟ್ ಆಯಿತು. ಪರಿಣಾಮ ಇಂಗೆಂಡ್ ಗೆಲುವಿನೊಂದಿಗೆ ವಿಶ್ವಕಪ್ ಗೆ ವಿದಾಯ ಹೇಳಿದರೆ ಪಾಕ್ ಸೋಲಿನೊಂದಿಗೆ ನಿರ್ಗಮಿಸಿತು.
ಸೆಮೀಸ್ ತಲುಪಲು ಕಷ್ಟ ಸಾಧ್ಯ ಫಲಿತಾಂಶ ಸಾಧಿಸುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನ ತಂಡ ಇಂಗ್ಲೆಂಡ್ ಟಾಸ್ ಗೆದ್ದು ಸ್ಟೋಟಕ ಬ್ಯಾಟಿಂಗ್ ಮಾಡಿದ್ದರಿಂದ ಅದರ ಸೆಮಿ ಫೈನಲ್ ಕನಸು ಕೊಚ್ಚಿ ಹೋಯಿತು.
ಗುರಿ ಬೆನ್ನಟ್ಟಲು ಬ್ಯಾಟಿಂಗ್ ಬಂದ ಪಾಕಿಸ್ತಾನ ಆಘಾತಕಾರಿ ಆರಂಭ ಪಡೆದುಕೊಂಡಿತು. ಓಪನರ್ ಅಬ್ದುಲ್ಲಾ ಶಫೀಕ್ ಮೊದಲ ಓವರ್ ನಲ್ಲಿಯೇ ಶೂನ್ಯಕ್ಕೆ ಡೇವಿಡ್ ವಿಲ್ಲಿ ಎಸೆತದಲ್ಲಿ ಔಟ್ ಆದರು. ಕಳೆದ ಪಂದ್ಯದ ಶತಕ ಬಾರಿಸಿ ನಿರೀಕ್ಷೆ ಮೂಡಿಸಿದ್ದ ಫಖರ್ ಝಮಾನ್ ಕೇವಲ ಒಂದಂಕಿಗೆ ಸೀಮಿತರಾದರು. ಟೂರ್ನಿಯುದ್ದಕ್ಕೂ ಸತತ ವೈಫಲ್ಯ ಅನುಭವಿಸಿದ ನಾಯಕ ಬಾಬರ್ ಅಝಮ್ 38 ರನ್ ಗಸ್ ಅಟ್ಕಿನ್ಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಬಳಿಕ ಬ್ಯಾಟಿಂಗ್ ಬಂದ ಸೌದ್ ಶಕೀಲ್ 29 ರನ್ ಗಳಿದರೆ, ಇಫ್ತಿಕಾರ್ ಅಹ್ಮದ್ 3 ರನ್ ಬಾರಿಸಿ ಕ್ರಮವಾಗಿ ರಶೀದ್, ಮೊಯಿನ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಪಾಕ್ ಪರ ಒಂಟಿ ಅರ್ಧಶತಕ ದಾಖಲಿಸಿದ ಆಗಾ ಸಲ್ಮಾನ್ 6 ಬೌಂಡರಿ 1 ಸಿಕ್ಸರ್ ಸಹಿತ 51 ರನ್ ಬಾರಿಸಿದರು.
ಶದಾಬ್ ಖಾನ್ 4, ಶಾಹೀನ್ ಅಫ್ರಿದಿ 25, ಮುಹಮ್ಮದ್ ವಸೀಂ 16, ಹಾರಿಸ್ ರವುಫ್ 35 ರನ್ ಗಳಿಸಿದರು.
ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಪಾಕಿಸ್ತಾನ ತಂಡಕ್ಕೆ 9 ನೇ ವಿಕೆಟ್ ಜೊತೆಯಾಟದಲ್ಲಿ ಹಾರಿಸ್ ರವೂಫ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. 23 ಎಸೆತಗಳಲ್ಲಿ 3 ಬೌಂಡರಿ 3 ಸಿಕ್ಸರ್ ನೊಂದಿಗೆ ಅವರ ಆಟ ಆಕರ್ಷಕವಾಗಿತ್ತು.
ಇಂಗ್ಲೆಂಡ್ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಡೇವಿಡ್ ವಿಲ್ಲಿ 3, ಅದಿಲ್ ರಶೀದ್, ಮೊಯಿನ್ ಅಲಿ, ಗಸ್ ಅಟ್ಕಿನ್ಸನ್ತಲಾ 2 ವಿಕೆಟ್ ಪಡೆದುಕೊಂಡರು. ಕ್ರಿಸ್ ವೋಕ್ಸ್ ಒಂದು ವಿಕೆಟ್ ಕಬಳಿಸಿದರು.