ಅಫ್ಘಾನಿಸ್ತಾನಕ್ಕೆ 283 ರನ್ ಗುರಿ ನೀಡಿದ ಪಾಕಿಸ್ತಾನ
Update: 2023-10-23 12:45 GMT
ಚೆನ್ನೈ : ಇಲ್ಲಿನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನದ ವಿರುದ್ಧ 7 ವಿಕೆಟ್ ಕಳೆದುಕೊಂಡು 282 ರನ್ ಗಳಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಬರ್ ಅಝಮ್ ಬಳಗ ಚೆಪಾಕ್ ನ ಬೌಲಿಂಗ್ ಪಿಚ್ ನಲ್ಲಿ ಉತ್ತಮ ಆರಂಭ ಪಡೆಯಿತು. 10. 1 ಓವರ್ ನಲ್ಲಿ ಇಮಾಮುಲ್ ಹಕ್ 22 ಎಸೆತಗಳಲ್ಲಿ 2 ಬೌಂಡರಿಗಳೊಂದಿಗೆ 17 ರನ್ ಗಳಿಸಿ ಅಝ್ಮತುಲ್ಲಾ ಓಮರ್ಝಾಯಿ ಅವರ ಬೌಲಿಂಗ್‌ನಲ್ಲಿ ನವೀನ್ ಉಲ್ ಹಕ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ನಾಯಕ ಬಾಬರ್ ಅಝಮ್ ನಾಯಕನ ಜವಾಬ್ದಾರಿಯುತ ಆಟವಾಡಿದರು. ಅಬ್ದುಲ್ಲಾ ಶಫೀಕ್ ಜೊತೆಗೂಡಿ ಇನ್ನಿಂಗ್ ಕಟ್ಟುವ ಪ್ರಯತ್ನ ಮಾಡಿದರು. 54 ರನ್ ಗಳ ಜೊತೆಯಾಟ ಆಡುವಾಗ 22.3 ಓವರ್‌ಗಳಲ್ಲಿ ಅಬ್ದುಲ್ಲಾ ಶಫೀಕ್ 75 ಎಸೆತಗಳಲ್ಲಿ 2 ಸಿಕ್ಸರ್, 4 ಬೌಂಡರಿಗಳೊಂದಿಗೆ 58 ರನ್ ಗಳಿಸಿದ್ದಾಗ ನೂರ್ ಅಹ್ಮದ್ ಅವರ ಎಲ್ ಬಿ ಡಬ್ಲ್ಯೂ ಬಲೆಗೆ ಬಿದ್ದರು.
PHOTO : cricketworldcup.com
ವಿಕೆಟ್ ಕೀಪರ್ ಮುಹಮ್ಮದ್ ರಿಝ್ವಾನ್ ಉತ್ತಮ ಆಟ ಪ್ರದರ್ಶನದ ನಿರೀಕ್ಷೆ ಹುಸಿಯಾಯಿತು. ಅವರು ಒಂದು ಸಿಕ್ಸರ್ ಬಾರಿಸಿ 10 ಎಸೆತಗಳಲ್ಲಿ 8 ರನ್ ಗಳಿಸಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಮುಜೀಬುರ್ರಹ್ಮಾನ್ ಗೆ ಕ್ಯಾಚಿತ್ತು ನಿರಾಸೆ ಮೂಡಿಸಿದರು.ಸೌದ್ ಶಕೀಲ್ 25, ಇಫ್ತಿಕಾರ್ 40, ಶಾದಾಬ್ ಖಾನ್ 40, ಶಾಹಿನ್ ಅಫ್ರಿದಿ 3 ರನ್ ಗಳಿಸಿದರು. 92 ಎಸೆತ ಎದುರಿಸಿದ ಬಾಬರ್ 4 ಬೌಂಡರಿಗಳೊಂದಿಗೆ 1 ಸಿಕ್ಸರ್ ಸಹಿತ 74 ರನ್ ಗಳಿಸಿ ನೂರ್ ಅಹ್ಮದ್ ಬೌಲಿಂಗ್ ನಲ್ಲಿ ಮುಹಮ್ಮದ್ ನಬಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಅಫ್ಘಾನಿಸ್ತಾನ ಪರ ನೂರ್ ಅಹ್ಮದ್ 3 ವಿಕೆಟ್ ಪಡೆದರು. ನವೀನ್ ಉಲ್ ಹಕ್ 2, ಮುಹಮ್ಮದ್ ನಬಿ, ಅಝ್ಮತುಲ್ಲಾ ಓಮರ್‌ಝಾಯಿ ತಲಾ ಎರಡು ವಿಕೆಟ್ ಪಡೆದರು.
ಈಗ ಅಫ್ಘಾನಿಸ್ತಾನಕ್ಕೆ 50 ಓವರ್ ಗಳಲ್ಲಿ ಗೆಲುವಿಗೆ 283 ರನ್ ಗಳ ಅವಶ್ಯಕತೆಯಿದೆ.