ಪ್ಯಾರಾಲಿಂಪಿಕ್ ಗೇಮ್ಸ್‌ನ ಸಮಾರೋಪ ಸಮಾರಂಭಕ್ಕೆ ಪ್ಯಾರಿಸ್ ಸಜ್ಜು
ಪ್ಯಾರಿಸ್ : ಕಳೆದ 11 ದಿನಗಳಿಂದ ನಡೆದ 17ನೇ ಆವೃತ್ತಿಯ ಪ್ಯಾರಾಲಿಂಪಿಕ್ ಗೇಮ್ಸ್ ರವಿವಾರ ತಡರಾತ್ರಿ ಪ್ಯಾರಿಸ್‌ನಲ್ಲಿ ತೆರೆ ಬೀಳಲಿದೆ.
ಸಮಾರೋಪ ಸಮಾರಂಭವು ಸ್ಟೇಡ್ ಡಿ ಫ್ರಾನ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕ್ರೀಡಾಂಗಣವು ಪ್ರಸಕ್ತ ಆವೃತ್ತಿಯ ಗೇಮ್ಸ್‌ನ ಟ್ರ್ಯಾಕ್ ಆ್ಯಂಡ್ ಫೀಲ್ಡ್ ಸ್ಪರ್ಧೆಗಳ ಆತಿಥ್ಯವನ್ನು ವಹಿಸಿತ್ತು.
84 ಸದಸ್ಯರ ಭಾರತೀಯ ಕ್ರೀಡಾಳುಗಳ ತಂಡವು ಪ್ಯಾರಿಸ್‌ನಲ್ಲಿ 7 ಚಿನ್ನ, 9 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ಜಯಿಸಿ ಒಂದೇ ಆವೃತ್ತಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದೆ
ಐತಿಹಾಸಿಕ ಸಾಧನೆ ಮಾಡಿದವರ ಪೈಕಿ ಹರ್ವಿಂದರ್ ಸಿಂಗ್ ಹಾಗೂ ಪ್ರೀತಿ ಪಾಲ್ ಅವರು ಸಮಾರೋಪ ಕಾರ್ಯಕ್ರಮದ ಪರೇಡ್ ಆಫ್ ನೇಶನ್ಸ್ ವೇಳೆ ಭಾರತದ ಧ್ವಜಧಾರಿಗಳಾಗಿರುತ್ತಾರೆ. ಹರ್ವಿಂದರ್ ಪ್ಯಾರಾ ಅರ್ಚರಿಯಲ್ಲಿ ಚಿನ್ನದ ಪದಕ ಜಯಿಸಿದ ಮೊದಲ ಭಾರತೀಯ ಎನಿಸಿಕೊಂಡರೆ, ಪ್ರೀತಿ ಪಾಲ್ ಮಹಿಳೆಯರ 100 ಮೀ. ಓಟದಲ್ಲಿ ಕಂಚು ಜಯಿಸಿ ಟ್ರ್ಯಾಕ್ ಫೀಲ್ಡ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದರು. ಆ ನಂತರ ಮಹಿಳೆಯರ 200 ಮೀ. ಟಿ35 ಸ್ಪರ್ಧೆಯಲ್ಲೂ ಕಂಚು ಗೆದ್ದಿದ್ದರು.
ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ ಗೇಮ್ಸ್‌ನ ಎಲ್ಲ ಉದ್ಘಾಟನಾ ಹಾಗೂ ಸಮಾರೋಪ ಸಮಾರಂಭಗಳಿಗೆ ಥಾಮಸ್ ಜೋಲಿ ಅವರು ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಪ್ಯಾರಾಲಿಂಪಿಕ್ಸ್ ಜ್ವಾಲೆಯನ್ನು ನಂದಿಸುವ ಜೊತೆಗೆ ಪ್ಯಾರಾಲಿಂಪಿಕ್ಸ್ ಧ್ವಜವನ್ನು ಲಾಸ್ ಏಂಜಲೀಸ್ 2028ರ ಸಂಘಟನಾ ಸಮಿತಿಗೆ ಹಸ್ತಾಂತರಿಸಲಾಗುತ್ತದೆ.
ಪ್ಯಾರಾಲಿಂಪಿಕ್ಸ್ ಧ್ವಜವನ್ನು ಲಾಸ್ ಏಂಜಲೀಸ್-2028ರ ಸಂಘಟಕರಿಗೆ ಹಸ್ತಾಂತರಿಸಿದ ನಂತರ ಟೋನಿ ಪ್ರಶಸ್ತಿ ವಿಜೇತ ನಟಿ ಹಾಗೂ ಬ್ರಾಡ್‌ವೇ ಸ್ಟಾರ್ ಅಲಿ ಸ್ಟ್ರೋಕರ್ ಅವರು ಸ್ಟೇಡ್ ಡಿ ಫ್ರಾನ್ಸ್‌ನಲ್ಲಿ ಅಮೆರಿಕದ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.