ಐಒಎ ಸಿಇಒ ಆಯ್ಕೆಯಲ್ಲಿ ಪಿ.ಟಿ.ಉಷಾರಿಂದ ಒತ್ತಡ ; ಕಾರ್ಯಕಾರಿ ಸಮಿತಿ ಸದಸ್ಯರಿಂದ ಆರೋಪ
ಹೊಸದಿಲ್ಲಿ: ಭಾರತೀಯ ಒಲಿಂಪಿಕ್ ಅಸೋಸಿಯೇಶನ್ (ಐಒಎ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ)ಯಾಗಿ ರಘು ಅಯ್ಯರ್ ಆಯ್ಕೆಗೆ ಹಾದಿ ಸುಗಮಗೊಳಿಸಬೇಕು ಎಂಬುದಾಗಿ ಅಸೋಸಿಯೇಶನ್ನ ಅಧ್ಯಕ್ಷೆ ಪಿ.ಟಿ. ಉಷಾ ತಮ್ಮ ಮೇಲೆ ಒತ್ತಡ ಹೇರಿದ್ದಾರೆ ಎಂದು ಅಸೋಸಿಯೇಶನ್ನ ಕಾರ್ಯಕಾರಿ ಸಮಿತಿಯ 12 ಸದಸ್ಯರು ಆರೋಪಿಸಿದ್ದಾರೆ.
ಅಯ್ಯರ್ ರನ್ನು ಸಿಇಒ ಆಗಿ ನೇಮಿಸುವ ಬಗ್ಗೆ ಉಷಾ ಜನವರಿ 6ರಂದು ಅಧಿಕೃತ ಹೇಳಿಕೆಯೊಂದನ್ನು ಹೊರಡಿಸಿದ್ದರು. ಆದರೆ, ಐಪಿಎಲ್ ತಂಡ ರಾಜಸ್ಥಾನ ರಾಯಲ್ಸ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಯ್ಯರ್ ನೇಮಕವನ್ನು ಕಾರ್ಯಕಾರಿ ಸಮಿತಿಯು ಅನುಮೋದಿಸಿಲ್ಲ ಎಂದು ಸಮಿತಿಯ 15 ಸದಸ್ಯರ ಪೈಕಿ 12 ಮಂದಿ ಹೇಳಿದ್ದಾರೆ.
“ಕಾರ್ಯಕಾರಿ ಸಮಿತಿಯ ಹಿಂದಿನ ಸಭೆಯ ಕಾರ್ಯಸೂಚಿಯಲ್ಲಿ ಸಿಇಒ ನೇಮಕಕ್ಕೆ ಸಂಬಂಧಿಸಿದ ವಿಷಯವನ್ನು ಸೇರಿಸಲಾಗಿರಲಿಲ್ಲ. ಬಳಿಕ, ಕಾರ್ಯಸೂಚಿಗೆ ಈ ವಿಷಯವನ್ನು ಸೇರಿಸಿ, ಅವಸರದ ನಿರ್ಧಾರವೊಂದನ್ನು ತೆಗೆದುಕೊಳ್ಳುವಂತೆ ನೀವು ನಮ್ಮ ಮೇಲೆ ಒತ್ತಡ ಹೇರಲು ಯತ್ನಿಸಿದಿರಿ’’ ಎಂದು 12 ಕಾರ್ಯಕಾರಿ ಸದಸ್ಯರು ಸಹಿ ಹಾಕಿರುವ ಜನವರಿ 14ರ ಪತ್ರದಲ್ಲಿ ಬರೆಯಲಾಗಿದೆ.
“ಈ ವಿಷಯದಲ್ಲಿ ನೀವು ವ್ಯವಹರಿಸಿರುವ ರೀತಿಯು ಸರಿಯಾಗಿಲ್ಲ ಮತ್ತು ನಮ್ಮ ಸಂಸ್ಥೆಯ ಘನತೆಗೆ ತಕ್ಕುದಾಗಿಲ್ಲ ಎಂದು ನಾವು ಭಾವಿಸಿದ್ದೇವೆ’’ ಎಂದು ಪತ್ರದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು ಹೇಳಿದ್ದಾರೆ.
ಉಷಾ, ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್ ಮತ್ತು ಟೇಬಲ್ ಟೆನಿಸ್ ಆಟಗಾರ ಅಚಂತ ಶರತ್ ಕಮಲ್ರನ್ನು ಹೊರತುಪಡಿಸಿ ಕಾರ್ಯಕಾರಿ ಸಮಿತಿಯ ಇತರ ಸದಸ್ಯರು ಪತ್ರಕ್ಕೆ ಸಹಿ ಹಾಕಿದ್ದಾರೆ.
ಹಿರಿಯ ಉಪಾಧ್ಯಕ್ಷ ಅಜಯ್ ಪಟೇಲ್, ಖಜಾಂಜಿ ಸಹದೇವ್ ಯಾದವ್, ಉಪಾಧ್ಯಕ್ಷರಾದ ರಾಜ್ ಲಕ್ಷ್ಮಿ ಮತ್ತು ಗಗನ್ ನಾರಂಗ್ ಮತ್ತು ಒಲಿಂಪಿಕ್ ಪದಕ ವಿಜೇತ ಕುಸ್ತಿ ಪಟು ಯೋಗೇಶ್ವರ್ ದತ್ತ್ ಪತ್ರಕ್ಕೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.
ಸಿಇಒ ವೇತನ ಮತ್ತು ಭತ್ತೆಯನ್ನು ಉಷಾ ಏಕಪಕ್ಷೀಯವಾಗಿ ವರ್ಷಕ್ಕೆ 3 ಕೋಟಿ ರೂಪಾಯಿ ಎಂಬುದಾಗಿ ನಿಗದಿಪಡಿಸಿದ್ದಾರೆ ಎಂಬುದಾಗಿಯೂ ಅವರು ಆರೋಪಿಸಿದ್ದಾರೆ.
ಆದರೆ, ಈ ಆರೋಪಗಳನ್ನು ಪಿ.ಟಿ. ಉಷಾ ನಿರಾಕರಿಸಿದ್ದಾರೆ. ಈ ವಿಷಯದ ಬಗ್ಗೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಗಿತ್ತು ಎಂದು ಹೇಳಿಕೊಂಡಿದ್ದಾರೆ.
“ಸಿಇಒ ಅಧಿಕಾರ ವಹಿಸಿಕೊಳ್ಳುವ ದಿನದಂದು ಕಾರ್ಯಕಾರಿ ಸಮಿತಿಯ ಕೆಲವು ಸದಸ್ಯರು ಆಕ್ಷೇಪ ಎತ್ತಿರುವುದು ಅವಮಾನದ ಸಂಗತಿಯಾಗಿದೆ. ಇದೇ ಕಾರಣಕ್ಕಾಗಿ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಭಾರತೀಯ ಒಲಿಂಪಿಕ್ ಸಮಿತಿಯನ್ನು ಅಮಾನತುಗೊಳಿಸಬಹುದಾಗಿದೆ’’ ಎಂದು ಉಷಾ ಹೇಳಿದ್ದಾರೆ.