ರಿಷಭ್ ಪಂತ್ ಪುನರಾಗಮನ | ಎದ್ದುನಿಂತು ಚಪ್ಪಾಳೆ ತಟ್ಟಿದ ಪ್ರೇಕ್ಷಕರು, ಸಹ ಆಟಗಾರರು

Update: 2024-03-23 15:54 GMT

 ರಿಷಭ್ ಪಂತ್ | Photo: X \ @CricCrazyJohns

ಹೊಸದಿಲ್ಲಿ: ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ಆಡಿದ ಐಪಿಎಲ್ ಪಂದ್ಯದಲ್ಲಿ ನಾಯಕ ರಿಷಭ್ ಪಂತ್ ಅವರು 453 ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟಿಗೆ ಪುನರಾಗಮನ ಮಾಡಿದ್ದಾರೆ. ಹೀಗಾಗಿ ಚಂಡಿಗಡದ ಮಹಾರಾಜ ಯದವೀಂದ್ರ ಸಿಂಗ್ ಕ್ರೀಡಾಂಗಣವು ಭಾವುಕ ಕ್ಷಣಕ್ಕೆ ಸಾಕ್ಷಿಯಾಯಿತು.

ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿಯ 2ನೇ ವಿಕೆಟ್ ಪತನಗೊಂಡಾಗ ಕ್ರೀಸ್ ಗೆ ಬಂದ ಪಂತ್‌ ಗೆ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು, ಸಹ ಆಟಗಾರರು ಎದ್ದು ನಿಂತು ಚಪ್ಪಾಳೆ ತಟ್ಟಿ ಶುಭ ಕೋರಿದರು. ಈ ಕ್ಷಣದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ಹರಿದಾಡುತ್ತಿದೆ.

ಭಾರತದ ವಿಕೆಟ್ ಕೀಪರ್-ಬ್ಯಾಟರ್ ಪಂತ್ 2022ರ ಡಿಸೆಂಬರ್ನಲ್ಲಿ ನಡೆದ ಭೀಕರ ಕಾರು ಅಪಘಾತದ ನಂತರ ಇದೇ ಮೊದಲ ಬಾರಿ ಕ್ರಿಕೆಟ್ ಮೈದಾನಕ್ಕೆ ಇಳಿಯುವ ಮೊದಲು ಭಾವುಕರಾದರು.

ನಿಜವಾಗಿಯೂ ನನ್ನ ಪಾಲಿಗೆ ಇದೊಂದು ಭಾವುಕ ಕ್ಷಣ. ಈ ಕ್ಷಣವನ್ನು ಆನಂದಿಸಲು ಬಯಸುವೆ ಎಂದು ಮುಲ್ಲನ್ಪುರದಲ್ಲಿ ಡೆಲ್ಲಿ ತಂಡ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ನಂತರ ಪಂತ್ ಪ್ರತಿಕ್ರಿಯಿಸಿದರು.

ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದು ಇನಿಂಗ್ಸ್ನ 13ನೇ ಓವರ್ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸುವ ಮೊದಲು 13 ಎಸೆತಗಳಲ್ಲಿ 18 ರನ್ ಗಳಿಸಿದರು.

ಎರಡು ಬೌಂಡರಿ ಗಳಿಸಿದ ಪಂತ್ ಉತ್ತಮ ಟಚ್ ನಲ್ಲಿದ್ದಂತೆ ಕಂಡುಬಂದರು. ಆದರೆ ಹರ್ಷಲ್ ಸ್ಲೋ ಬೌನ್ಸ್ ಕೆಣಕಲು ಹೋಗಿ ಜಾನಿ ಬೈರ್ಸ್ಟೋವ್ಗೆ ಕ್ಯಾಚ್ ನೀಡಿದರು.

2022ರ ಡಿಸೆಂಬರ್ನಲ್ಲಿ ಪಂತ್ ಚಲಾಯಿಸಿದ್ದ ಮರ್ಸಿಡಿಸ್ ಕಾರು ಬೆಳಗ್ಗಿನ ಜಾವ ದಿಲ್ಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರೋರ್ಕಿ ಸಮೀಪ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ಆಗ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಇದರ ಪರಿಣಾಮವಾಗಿ ಪಂತ್‌ ಗೆ ಗಂಭೀರ ಸ್ವರೂಪದ ಗಾಯವಾಗಿದ್ದವು. ತಕ್ಷಣವೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ವಿಶೇಷ ವೈದ್ಯಕೀಯ ಆರೈಕೆ ಹಾಗೂ ಶಸ್ತ್ರಚಿಕಿತ್ಸೆಗಾಗಿ ಮುಂಬೈಗೆ ವಿಮಾನದಲ್ಲಿ ಏರ್ಲಿಫ್ಟ್ ಮಾಡಲಾಗಿತ್ತು.

ಕಾರು ಅಪಘಾತದಲ್ಲಿ ಪಂತ್ ಬಲ ಮೊಣಕಾಲಿನ ಅಸ್ತಿರಜ್ಜುಗೆ ಹಾನಿಯಾಗಿತ್ತು. ತಲೆ, ಕಾಲು, ಬಲಗೈ ಜೊತೆಗೆ ಬೆನ್ನಿಗೆ ಗಾಯವಾಗಿತ್ತು.

ಇದೀಗ ಸಂಪೂರ್ಣ ಚೇತರಿಸಿಕೊಂಡಿರುವ ಪಂತ್ ಆಸ್ಟ್ರೇಲಿಯದ ಡೇವಿಡ್ ವಾರ್ನರ್ ರಿಂದ ಡೆಲ್ಲಿ ತಂಡದ ನಾಯಕತ್ವ ಹೊಣೆ ವಹಿಸಿಕೊಂಡಿದ್ದಾರೆ. ವಾರ್ನರ್ ನಾಯಕತ್ವದಲ್ಲಿ ಡೆಲ್ಲಿ ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿ ಲೀಗ್ ಅಂಕಪಟ್ಟಿಯಲ್ಲಿ 9ನೇ ಸ್ಥಾನ ಪಡೆದಿತ್ತು.

2008ರಲ್ಲಿ ಐಪಿಎಲ್‌ ಗೆ ಸೇರ್ಪಡೆಯಾದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ಪ್ರಶಸ್ತಿ ಜಯಿಸಿಲ್ಲ. ಆಕ್ರಮಣಕಾರಿ ಎಡಗೈ ಬ್ಯಾಟರ್ ಪಂತ್ ಭಾರತದ ಪರ 3 ಮಾದರಿಯ ಕ್ರಿಕೆಟ್ ನಲ್ಲಿ 129 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು ಆರು ಶತಕಗಳ ಸಹಿತ ಒಟ್ಟು 4,123 ರನ್ ಗಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News