ಎರಡನೇ ಟೆಸ್ಟ್: ಗೆಲುವಿನ ಹಾದಿಯಲ್ಲಿ ಆಸ್ಟ್ರೇಲಿಯ

Update: 2024-01-27 18:31 GMT

Photo: twitter.com/ICC

ಬ್ರಿಸ್ಬೇನ್: ವೆಸ್ಟ್‌ಇಂಡೀಸ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲ್ಲಲು 216 ರನ್ ಗುರಿ ಪಡೆದಿರುವ ಆಸ್ಟ್ರೇಲಿಯ ತಂಡ 3ನೇ ದಿನದಾಟದಂತ್ಯಕ್ಕೆ 19 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 60 ರನ್ ಗಳಿಸಿದ್ದು, ಗೆಲುವಿಗೆ 8 ವಿಕೆಟ್ ನೆರವಿನಿಂದ ಇನ್ನೂ 156 ರನ್ ಗಳಿಸಬೇಕಾಗಿದೆ.

ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿರುವ ಆಸ್ಟ್ರೇಲಿಯದ ಆರಂಭಿಕ ಬ್ಯಾಟರ್ ಸ್ಟೀವನ್ ಸ್ಮಿತ್(ಔಟಾಗದೆ 33 ರನ್)ಹಾಗೂ ಕ್ಯಾಮರೂನ್ ಗ್ರೀನ್(ಔಟಾಗದೆ 9)ಕ್ರೀಸ್‌ನಲ್ಲಿದ್ದಾರೆ.

ಮುಂದಿನ ಎರಡು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಇದು ಆಸೀಸ್ ಗೆಲುವಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.

ಆಸ್ಟ್ರೇಲಿಯವು ಟೀ ವಿರಾಮದ ನಂತರ ವೆಸ್ಟ್‌ಇಂಡೀಸ್‌ನ 2ನೇ ಇನಿಂಗ್ಸ್‌ನ್ನು 193 ರನ್‌ಗೆ ನಿಯಂತ್ರಿಸಿತು. ಇಂದು 1 ವಿಕೆಟ್ ನಷ್ಟಕ್ಕೆ 13 ರನ್‌ನಿಂದ 2ನೇ ಇನಿಂಗ್ಸ್ ಮುಂದುವರಿಸಿದ ವಿಂಡೀಸ್ ಕೊನೆಯ ಅವಧಿಯಲ್ಲಿ ಕೇವಲ 10 ರನ್‌ಗೆ ಕೊನೆಯ 4 ವಿಕೆಟ್‌ಗಳನ್ನು ಕಳೆದುಕೊಂಡಿತು.

ಜೋಶ್ ಹೇಝಲ್‌ವುಡ್(3-23)ಹಾಗೂ ನಾಥನ್ ಲಿಯೊನ್(3-42)ತಲಾ ಮೂರು ವಿಕೆಟ್‌ಗಳನ್ನು ಉರುಳಿಸಿದರು.

ಗೆಲ್ಲಲು ಸುಲಭ ಸವಾಲು ಪಡೆದ ಆಸ್ಟ್ರೇಲಿಯವು 42 ರನ್‌ಗೆ ಉಸ್ಮಾನ್ ಖ್ವಾಜಾ(10 ರನ್) ಹಾಗೂ ಲ್ಯಾಬುಶೇನ್(5) ವಿಕೆಟ್‌ಗಳನ್ನು ಕಳೆದುಕೊಂಡಿತು. ಸ್ಮಿತ್ ಹಾಗೂ ಗ್ರೀನ್ ತಂಡಕ್ಕೆ ಆಸರೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News