ದ್ವಿತೀಯ ಟೆಸ್ಟ್ : ವೇಗದ ಅರ್ಧಶತಕ ಸಿಡಿಸಿದ ರೋಹಿತ್ ಶರ್ಮಾ
ಟ್ರಿನಿಡಾಡ್, ಜು.23: ಭಾರತದ ನಾಯಕ ರೋಹಿತ್ ಶರ್ಮಾ ಪ್ರಸಕ್ತ ಕೆರಿಬಿಯನ್ ಪ್ರವಾಸದಲ್ಲಿ ತನ್ನ ಶ್ರೇಷ್ಠ ಫಾರ್ಮ್ ಅನ್ನು ಮುಂದುವರಿಸಿದ್ದು, ಸತತ ಮೂರನೇ ಬಾರಿ 50ಕ್ಕೂ ಅಧಿಕ ರನ್ ಗಳಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 35 ಎಸೆತಗಳಲ್ಲಿ ವೇಗವಾಗಿ ಅರ್ಧಶತಕವನ್ನು ಪೂರೈಸಿರುವ ರೋಹಿತ್ ವೈಯಕ್ತಿಕ ಮೈಲಿಗಲ್ಲನ್ನು ಕ್ರಮಿಸಿದರು.
ಬಲಗೈ ಆರಂಭಿಕ ಬ್ಯಾಟರ್ ರೋಹಿತ್ ರವಿವಾರ ವೆಸ್ಟ್‌ಇಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್‌ನ 4ನೇ ದಿನದಾಟದಲ್ಲಿ ಈ ಸಾಧನೆ ಮಾಡಿದರು. ರೋಹಿತ್ ಮೊದಲ ಟೆಸ್ಟ್ ಪಂದ್ಯದಲ್ಲಿ 103 ರನ್ ಗಳಿಸಿದ್ದರು. 2ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 80 ರನ್ ಗಳಿಸಿರುವ ರೋಹಿತ್ ಇಂದು 2ನೇ ಇನಿಂಗ್ಸ್‌ನಲ್ಲಿ ಗ್ಯಾಬ್ರಿಯೆಲ್ ಬೌಲಿಂಗ್‌ನಲ್ಲಿ ಔಟಾಗುವ ಮೊದಲು 57 ರನ್ ಗಳಿಸಿದರು. ರೋಹಿತ್ ಅವರ 44 ಎಸೆತಗಳ ಇನಿಂಗ್ಸ್‌ನಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ಗಳಿದ್ದವು.
ವೆಸ್ಟ್ ಇಂಡೀಸ್ ತಂಡವನ್ನು 255 ರನ್‌ಗೆ ಆಲೌಟ್ ಮಾಡಿ 183 ರನ್ ಮುನ್ನಡೆ ಪಡೆದಿದ್ದ ಭಾರತಕ್ಕೆ ರೋಹಿತ್ ಹಾಗೂ ಯಶಸ್ವಿ ಜೈಸ್ವಾಲ್ 2ನೇ ಇನಿಂಗ್ಸ್‌ನಲ್ಲಿ ಭರ್ಜರಿ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 98 ರನ್ ಜೊತೆಯಾಟ ನಡೆಸಿತು.