ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್
ಮುಂಬೈ: ಖ್ಯಾತ ಕ್ರಿಕೆಟಿಗ ಶಿಖರ್ ಧವನ್ ಶನಿವಾರ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ್ದಾರೆ. ಎಲ್ಲ ಬಗೆಯ ದೇಶೀಯ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‍ನಿಂದ ನಿವೃತ್ತರಾಗುತ್ತಿರುವುದಾಗಿ ಅವರು ಪ್ರಕಟಿಸಿದ್ದಾರೆ.
ಧವನ್ 2022ರ ಡಿಸೆಂಬರ್ ನಲ್ಲಿ ಧವನ್ ಭಾರತದ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಶುಭ್‍ಮನ್ ಗಿಲ್ ಆರಂಭಿಕ ಬ್ಯಾಟ್ಸ್ಮನ್ ಆಗಿ ಆಯ್ಕೆಯಾದ ಬಳಿಕ ಧವನ್ ಸ್ಥಾನ ಕಳೆದುಕೊಂಡಿದ್ದರು. ವೃತ್ತಿಜೀವನದುದ್ದಕ್ಕೂ ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೊದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.
ದೆಹಲಿಯಲ್ಲಿ ಜನಿಸಿದ 38 ವರ್ಷ ವಯಸ್ಸಿನ ಧವನ್ ಆಸ್ಟ್ರೇಲಿಯಾ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಆರಂಭಿಕ ಪಂದ್ಯದಲ್ಲಿ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯ ಸಂಪಾದನೆಯೊಂದಿಗೆ ಪೆವಿಲಿಯನ್‍ಗೆ ವಾಪಸ್ಸಾಗಿದ್ದರು. 2013ರಲ್ಲಿ ಮತ್ತೆ ತಂಡಕ್ಕೆ ಸೇರ್ಪಡೆಗೊಂಡ ಅವರು ಎಲ್ಲ ಮೂರು ಬಗೆಯ ಕ್ರಿಕೆಟ್‍ಗಳಲ್ಲಿ ಉತ್ತಮ ಸಾಧನೆ ಮಾಡಿ ತಮ್ಮ ಸ್ಥಾನ ಭದ್ರಪಡಿಸಿಕೊಂಡರು.
"ಭಾರತಕ್ಕಾಗಿ ನಾನು ಆಡುವಾಗ ಮನಸ್ಸಿನಲ್ಲಿ ಒಂದು ಗುರಿ ಇಟ್ಟುಕೊಂಡು ಆಡುತ್ತಿದ್ದೆ. ಅದನ್ನು ಸಾಧಿಸಿದ್ದು, ಜನತೆಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.