ವಿಶ್ವಕಪ್: ಇಂಗ್ಲೆಂಡ್ ವಿರುದ್ಧ 229 ರನ್ ಗಳ ಭರ್ಜರಿ ಜಯ ದಾಖಲಿಸಿದ ದಕ್ಷಿಣ ಆಫ್ರಿಕಾ

Update: 2023-10-21 15:22 GMT

Photo credit: cricketworldcup.com

ಮುಂಬೈ: ಇಲ್ಲಿನ ವಾಂಖೆಡೆ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ 229 ರನ್ ಗಳಿಂದ ಭಾರೀ ಜಯ ಗಳಿಸಿದೆ.

ದಕ್ಷಿಣ ಆಫ್ರಿಕಾ ಪರ ಹೆನ್ರಿಕ್ ಕ್ಲಾಸನ್ ಸ್ಪೋಟಕ ಶತಕ ಬಾರಿಸಿದರೆ ರೀಝ ಹೆಂಡ್ರಿಕ್ಸ್, ರಸ್ಸಿ ವಾನ್ ಡರ್ ಡುಸ್ಸನ್ ಮತ್ತು ಮಾರ್ಕೋ ಜಾನ್ಸನ್ ಆಕರ್ಷಕ ಅರ್ಧಶತಕದ ನೆರವಿಂದ 399 ರನ್ ಗಳ ಬೃಹತ್ ಮೊತ್ತ ಪೇರಿಸಿತು.

ಹರಿಣಗಳು ನೀಡಿದ ಕಠಿಣ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಇಂಗ್ಲೆಂಡ್ ಗೆ ಸ್ಪೋಟಕ ಆರಂಭದ ನಿರೀಕ್ಷೆ ಇತ್ತು. ಆದರೆ ಇಂಗ್ಲೆಂಡ್ ಗೆ ಆಘಾತ ನೀಡಿದ ದಕ್ಷಿಣ ಆಫ್ರಿಕಾ ಬೌಲರ್ಸ್ ಕೇವಲ 67 ರನ್ ಗೆ ತಂಡದ ಐವರು ಪ್ರಮುಖ ಬ್ಯಾಟರ್ ಗಳನ್ನು ಪೆವಿಲಿಯನ್ ಗೆ ಅಟ್ಟಿದರು. ಆರಂಭಿಕರಾದ ಜಾನಿ ಬೈರ್ ಸ್ಟೋವ್ 10 ರನ್ ಗೆ ಲುಂಗಿ ಗಿಡಿ ಬೌಲಿಂಗ್ ನಲ್ಲಿ ವಿಕೆಟ್ ಕಳೆದುಕೊಂಡರೆ ಡೇವಿಡ್ ಮಲನ್(6) ಹಾಗೂ ಜೋ ರೂಟ್ (2) ಮಾರ್ಕೋ ಜಾನ್ಸನ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ಆಡುವ ಬಳಗಕ್ಕೆ ಆಯ್ಕೆ ಆಗಿದ್ದ ಬೆನ್ ಸ್ಟೋಕ್ಸ್ 5 ರನ್ ಗೆ ರಬಾಡ ಬೌಲಿಂಗ್ ನಲ್ಲಿ ಕಾಟ್ ಆಂಡ್ ಬೌಲ್ಡ್ ಆಗುವ ಮೂಲಕ ನಿರಾಶೆ ಮೂಡಿಸಿದರು. ತಂಡದ ಆರಂಭಿಕ ನಾಲ್ವರು ಬ್ಯಾಟರ್ ಗಳು ಕೇವಲ ಒಂದಂಕಿ ಗೆ ಔಟ್ ಆದದ್ದು ಇಲ್ಲಿ ಗಮನಿಸಬಹುದು. 12 ನೇ ಓವರ್ ಬೌಲ್ ಮಾಡಿದ ಜೆರಾಲ್ಡ್ ಒಂದೇ ಓವರ್ ನಲ್ಲಿ ಹ್ಯಾರಿ ಬ್ರೂಕ್ ಹಾಗೂ ನಾಯಕ ಜೋಸ್ ಬಟ್ಲರ್ ಔಟ್ ಮಾಡುವ ಮೂಲಕ ಇಂಗ್ಲೆಂಡ್ ಕೈಯಿಂದ ಸಂಪೂರ್ಣವಾಗಿ ಗೆಲುವನ್ನು ದೂರ ಮಾಡಿದರು. ಹರಿಣಗಳ ಸಂಘಟಿತ ಬೌಲಿಂಗ್ ಎದುರು ನಿಲ್ಲಲೂ ಪರದಾಡಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ 100 ರನ್ ಗಳಿಸುವಷ್ಟರಲ್ಲಿಯೇ 8 ವಿಕೆಟ್ ಕಳೆದುಕೊಂಡು ತೀವ್ರ ಮುಖಭಂಗಕ್ಕೆ ಒಳಗಾಯಿತು. ಡೇವಿಡ್ ವಿಲ್ಲಿ 12, ಅದಿಲ್ ರಶೀದ್ 10 ರನ್ ಗಳಿಸಿ ಕ್ರಮವಾಗಿ ಲುಂಗಿ ಗಿಡಿ , ಜೆರಾಲ್ಡ್ ಗೆ ವಿಕೆಟ್ ನೀಡಿದರು. ಕಡೇ ಗಳಿಗೆಯಲ್ಲಿ ಸ್ಪೋಟಕ ಬ್ಯಾಟ್ ಬೀಸಿದ ಮಾರ್ಕ್ ವುಡ್ 43 ಗಳಿಸಿದರೆ ಗಸ್ ಅಟ್ಕಿನ್ಸನ್ 35 ರನ್ ಗಳಿಸಿದರು. ರೀಸ್ ಟಾಪ್ಲಿ ಗಾಯದಿಂದಾಗಿ ನಿವೃತ್ತಿಯಾದ ಪರಿಣಾಮ 170 ಕ್ಕೆ ಆಲೌಟ್ ಆಯಿತು.

ದಕ್ಷಿಣ ಆಫ್ರಿಕಾ ಪರ ಜೆರಾಲ್ಡ್ 3 ವಿಕೆಟ್ ಪಡೆದರೆ ಲುಂಗಿ ಗಿಡಿ, ಮಾರ್ಕೋ ಜಾನ್ಸನ್ 2 ಹಾಗೂ ಕಗಿಸೊ ರಬಾಡ ಮತ್ತು ಕೇಶವ್ ಮಹಾರಾಜ್ ತಲಾ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಬಂದ ದಕ್ಷಿಣ ಆಫ್ರಿಕಾ ಮೊದಲ ಓವರ್ ನಲ್ಲಿಯೇ ಆರಂಭಿಕ ಬ್ಯಾಟರ್ ಕ್ವಿಂಟನ್ ಡಿಕಾಕ್ 4 ರನ್ ಗೆ ರೀಸ್ ಟಾಪ್ಲಿ ಬೌಲಿಂಗ್ ನಲ್ಲಿ ಔಟ್ ಆಗುವ ಮೂಲಕ ಅಘಾತ ಎದುರಿಸಿತು. ಆರಂಭಿಕ ವಿಕೆಟ್ ಬೇಗ ಪತನದ ಹೊರತಾಗಿಯೂ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಭರ್ಜರಿ ಆಟ ಪ್ರದರ್ಶಿಸಿತು. ದ್ವಿತೀಯ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ರೀಝ ಹೆಂಡ್ರಿಕ್ಸ್ 9 ಬೌಂಡರಿ 3 ಸಿಕ್ಸರ್ ಸಹಿತ 85 ರನ್ ಬಾರಿಸಿದರೆ ಅವರಿಗೆ ಸಾಥ್ ನೀಡಿದ್ದ ರಸ್ಸಿ ವಾನ್ ಡರ್ ಡುಸ್ಸನ್ 8 ಬೌಂಡರಿ ಸಹಿತ 60 ರನ್ ಬಾರಿಸಿ ಕ್ರಮವಾಗಿ ಆದಿಲ್ ರಶೀದ್ ಗೆ ವಿಕೆಟ್ ಒಪ್ಪಿಸಿದರು.

ಬಳಿಕ ಬ್ಯಾಟಿಂಗ್ ಗೆ ಬಂದ ನಾಯಕ ಐಡೆನ್ ಮಾಕ್ರಮ್ 42 ರನ್ ಗಳಿಸಿರುವಾಗ ರೀಸ್ ಟಾಪ್ಲಿ ಬೌಲಿಂಗ್ ನಲ್ಲಿ ಬೈರ್ ಸ್ಟೋವ್ ಹಿಡಿದ ಉತ್ತಮ ಕ್ಯಾಚ್ ಗೆ ಔಟ್ ಆಗಿ ಇನ್ನಿಂಗ್ಸ್ ಮುಗಿಸಿದರು. ತಂಡದ ಮೊತ್ತ ಹೆಚ್ಚಿಸುವ ಜವಾಬ್ದಾರಿ ಹೊತ್ತಿದ್ದ ಡೇವಿಡ್ ಮಿಲ್ಲರ್ ಕೇವಲ 5 ರನ್ ಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಪೆವಿಲಿಯನ್ ಸೇರಿದರು. ಐದನೇ ಕ್ರಮಾಂಕ ದಲ್ಲಿ ಬ್ಯಾಟಿಂಗ್ ಬಂದ ಅನುಭವಿ ಬ್ಯಾಟರ್ ಹೆನ್ರಿಕ್ ಕ್ಲಾಸನ್ 109 ರನ್ ಸ್ಪೋಟಕ ಶತಕ ಬಾರಿಸಿ ತಂಡದ ಮುನ್ನೂರ ಐವತ್ತರ ಗಡಿ ದಾಟಿಸಿದರು. ಮಾರ್ಕೋ ಜಾನ್ಸನ್ (77 ರನ್) ಜೊತೆ ಸೇರಿ ಕ್ಲಾಸನ್ ಭರ್ಜರಿ 151 ರನ್ ಜೊತೆಯಾಟ ಆಡಿದರು.

ಇಂಗ್ಲೆಂಡ್ ಪರ ರೀಸ್ ಟಾಪ್ಲಿ 3 ವಿಕೆಟ್ ಪಡೆದರೆ ಆದಿಲ್ ರಶೀದ್, ಗಸ್ ಅಟ್ಕಿನ್ಸನ್ ತಲಾ 2 ವಿಕೆಟ್ ಕಬಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News