ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಬ್ಯಾಟಿಂಗ್ ಆಯ್ಕೆ
ಮುಂಬೈ : ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.
ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಗೆದ್ದಿರುವ ದಕ್ಷಿಣ ಆಫ್ರಿಕಾ ಈ ಪಂದ್ಯ ಗೆಲ್ಲುವ ಫೆವರೀಟ್ ಎನಿಸಿದೆ. ತಂಡ ಆಲ್ ರೌಂಡರ್ ಗಳನ್ನು ಹೊಂದಿದ್ದು, ಉತ್ತಮ ರನ್ ರೇಟ್ ಕಾಯ್ದುಕೊಂಡಿದೆ. ಅತಿಯಾದ ಆತ್ಮವಿಶ್ವಾಸವೂ ತಂಡಕ್ಕೆ ಮುಳುವಾಗಿದೆ. ಈ ಹಿಂದೆ ನೆದರ್ ಲ್ಯಾಂಡ್ಸ್ ವಿರುದ್ಧ ಸೋತಿದ್ದೇ ಇದಕ್ಕೆ ಸಾಕ್ಷಿ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ವಿಶ್ವಕಪ್‌ನಲ್ಲಿ ಅತೀ ವೇಗದ ಶತಕ ದಾಖಲಿಸಿದ ನಾಯಕ ಐಡೆನ್ ಮ್ಯಾರ್ಕ್ರಮ್ ದಕ್ಷಿಣ ಆಫ್ರಿಕಾ ತಂಡಕ್ಕೆ ಆನೆ ಬಲ ನೀಡಿದ್ದಾರೆ. ವಾಂಖೆಡೆ ಪಿಚ್ ವರದಿಗಳು ಬ್ಯಾಟಿಂಗ್ ಗೆ ಹೆಚ್ಚಿನ ಅವಕಾಶ ನೀಡುವಂತೆ ಕಾಣುತ್ತಿದೆ. ಇದು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಗೆ ಹೆಚ್ಚಿನ ಅವಕಾಶ ನೀಡುವ ಸಾಧ್ಯತೆಯಿದೆ.
ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿರುವ ಬಾಂಗ್ಲಾದೇಶ 4 ಪಂದ್ಯಗಳಲ್ಲಿ 1ನ್ನು ಮಾತ್ರ ಗೆದ್ದು ಮೂರನ್ನು ಸೋತಿದೆ. ಈ ತಂಡವನ್ನು ದುರ್ಬಲ ಎಂದು ಹೇಳುವ ಹಾಗಿಲ್ಲ. ಅಚ್ಚರಿಯ ಫಲಿತಾಂಶ ನೀಡುವುದರಲ್ಲಿ ಬಾಂಗ್ಲಾದೇಶ ತಂಡ ಎತ್ತಿದ ಕೈ. ಹಾಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಏಕಮುಖವಾಗಿ ಇರಲು ಸಾಧ್ಯವಿಲ್ಲ. ಪಂದ್ಯ ಆರಂಭವಾಗುತ್ತಿದೆ. ಎಲ್ಲರ ಚಿತ್ತ ಮುಂಬೈನ ವಾಂಖೆಡೆಯತ್ತ ಮುಖ ಮಾಡಿದೆ.