ಪಾಕಿಸ್ತಾನ ವಿರುದ್ಧ 2ನೇ ಟೆಸ್ಟ್‌ಗೆ ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಲಭ್ಯ
ಮುಲ್ತಾನ್ : ಮಂಡಿರಜ್ಜು ಗಾಯದಿಂದ ಚೇತರಿಸಿಕೊಂಡಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಪಾಕಿಸ್ತಾನದ ವಿರುದ್ದ ಮುಲ್ತಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಸ್ವದೇಶದಲ್ಲಿ ಶ್ರೀಲಂಕಾ ತಂಡದ ವಿರುದ್ಧ ನಡೆದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ ಕಳೆದ ವಾರ ಪಾಕಿಸ್ತಾನ ವಿರುದ್ಧ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಿಂದ ಸ್ಟೋಕ್ಸ್ ಹೊರಗುಳಿದಿದ್ದರು. 33ರ ಹರೆಯದ ಸ್ಟೋಕ್ಸ್ ಈ ವರ್ಷದ ಜುಲೈನಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆದಿದ್ದ ಎಲ್ಲ 3 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು.
ಮುಲ್ತಾನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ದಾಖಲೆ ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್‌ನ ಆಡುವ 11ರ ಬಳಗದಲ್ಲಿ ಕೇವಲ 2 ಬದಲಾವಣೆಗಳನ್ನು ಮಾಡಲಾಗಿದ್ದು, ಸ್ಟೋಕ್ಸ್ ಹಾಗೂ ಮ್ಯಾಟ್ ಪೋಟ್ಸ್ ಅವಕಾಶ ಪಡೆದಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಹಾಗೂ 47 ರನ್ ಅಂತರದಿಂದ ಜಯ ಸಾಧಿಸಿರುವ ಇಂಗ್ಲೆಂಡ್ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಸ್ಟೋಕ್ಸ್ ಅನುಪಸ್ಥಿತಿಯಲ್ಲಿ ಒಲಿ ಪೋಪ್ ತಂಡದ ನಾಯಕತ್ವವಹಿಸಿದ್ದರು.
ಸರಣಿಯ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಅಕ್ಟೋಬರ್ 24ರಿಂದ ರಾವಲ್ಪಿಂಡಿಯಲ್ಲಿ ಆರಂಭವಾಗಲಿದೆ.
►ದ್ವಿತೀಯ ಟೆಸ್ಟ್‌ಗೆ ಇಂಗ್ಲೆಂಡ್ ಕ್ರಿಕೆಟ್ ತಂಡ
ಝಾಕ್ ಕ್ರಾಲಿ, ಬೆನ್ ಡಕೆಟ್, ಒಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್(ನಾಯಕ), ಜೆಮಿ ಸ್ಮಿತ್, ಬ್ರೈಡನ್ ಕಾರ್ಸ್, ಮ್ಯಾಟ್ ಪಾಟ್ಸ್, ಜಾಕ್ ಲೀಚ್, ಶುಐಬ್ ಬಶೀರ್.