ನೇಮರ್‌ಗೆ ಯಶಸ್ವಿ ಮಂಡಿ ಶಸ್ತ್ರಚಿಕಿತ್ಸೆ; ಹಲವು ತಿಂಗಳುಗಳ ಕಾಲ ಫುಟ್ಬಾಲ್‌ನಿಂದ ಹೊರಗುಳಿಯಲಿರುವ ಫುಟ್ಬಾಲ್ ತಾರೆ
ಬ್ಯೂನಸ್ ಐರಿಸ್: ಕಳೆದ ತಿಂಗಳು ಬ್ರೆಝಿಲ್‌ನಲ್ಲಿ ನಡೆದ ಪಂದ್ಯವೊಂದರಲ್ಲಿ ಆಡುವಾಗ ಗಾಯಗೊಂಡಿದ್ದ ದೇಶದ ಫುಟ್ಬಾಲ್ ತಾರೆ ನೇಮರ್ ಗುರುವಾರ ಮಂಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.
ಅಕ್ಟೋಬರ್ 17ರಂದು ಉರುಗ್ವೆ ವಿರುದ್ಧ ನಡೆದ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಎದುರಾಳಿ ಮಿಡ್‌ಫೀಲ್ಡರ್ ನಿಕೊಲಸ್ ಡಿ ಲಾ ಕ್ರೂಝ್‌ರೊಂದಿಗೆ ಢಿಕ್ಕಿಯಾದ ಬಳಿಕ 31 ವರ್ಷದ ನೇಮರ್‌ರನ್ನು ಸ್ಟ್ರೆಚರ್‌ನಲ್ಲಿ ಮೈದಾನದಿಂದ ಹೊರಗೆ ಸಾಗಿಸಲಾಗಿತ್ತು. ಆ ಪಂದ್ಯದಲ್ಲಿ ಬ್ರೆಝಿಲ್ 2-0 ಗೋಲಿನಿಂದ ಸೋತಿದೆ.
ಅವರು ಗಂಭೀರ ಮಂಡಿನೋವಿಗೆ ಒಳಗಾಗಿರುವುದು ತಪಾಸಣೆಯ ವೇಳೆ ಪತ್ತೆಯಾಯಿತು.
‘‘ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಫಲಿತಾಂಶದಿಂದ ನಮಗೆ ತೃಪ್ತಿಯಾಗಿದೆ’’ ಎಂದು ಶಸ್ತ್ರಚಿಕಿತ್ಸೆ ನಡೆಸಿದ ಬ್ರೆಝಿಲ್ ತಂಡದ ವೈದ್ಯ ರೋಡ್ರಿಗೊ ಲಸ್ಮರ್ ಹೇಳಿದರು.
ಅವರು ಇನ್ನೂ ಎರಡು ದಿನಗಳ ಕಾಲ ಶಸ್ತ್ರಚಿಕಿತ್ಸೆ ನಡೆದ ಬೆಲೊ ಹಾರಿರೆಂಟೆ ನಗರದ ಆಸ್ಪತ್ರೆಯಲ್ಲೇ ಉಳಿಯುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುವ ಅವದಿಯಲ್ಲಿ, ಅವರು ಹಲವು ತಿಂಗಳುಗಳ ಕಾಲ ಫುಟ್ಬಾಲ್‌ನಿಂದ ಹೊರಗುಳಿಯಲಿದ್ದಾರೆ.
ಇದಕ್ಕೂ ಮೊದಲು, 2018ರಲ್ಲಿ ಪಾದದ ಮೂಳೆಮುರಿತಕ್ಕೆ ಒಳಗಾಗಿದ್ದ ನೇಮರ್ ಇದೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು.