ವಿನೋದ್ ಕಾಂಬ್ಳಿ ನೆರವಿಗೆ ಮುಂದಾದ 1983ರ ವಿಶ್ವಕಪ್ ಕ್ರಿಕೆಟ್‌ ತಂಡ | ಆತ ನಮ್ಮ ಪುತ್ರನಿದ್ದಂತೆ ಎಂದ ಸುನೀಲ್ ಗಾವಸ್ಕರ್

Update: 2024-12-08 06:14 GMT

Photo : x/@PTI_News screengrab

ಮುಂಬೈ: ಮಾಜಿ ಭಾರತೀಯ ಕ್ರಿಕೆಟಿಗ ವಿನೋದ್ ಕಾಂಬ್ಳಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಕುರಿತು ಕಳವಳಗಳು ವ್ಯಕ್ತವಾಗಿರುವ ಬೆನ್ನಿಗೇ, ಅವರಿಗೆ ನೆರವು ನೀಡಲು ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಮುಂದಾಗಿದ್ದಾರೆ.

ಇತ್ತೀಚೆಗೆ ಮುಂಬೈನ ಶಿವಾಜಿ ಪಾರ್ಕ್ ನಲ್ಲಿ ನಡೆದಿದ್ದ ವಿನೋದ್ ಕಾಂಬ್ಳಿ ಹಾಗೂ ಸಚಿನ್ ತೆಂಡೂಲ್ಕರ್ ರ ತರಬೇತುದಾರರಾದ ರಮಾಕಾಂತ್ ಅಚರೇಕರ್ ಸನ್ಮಾನ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಇಬ್ಬರೂ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ವಿನೋದ್ ಕಾಂಬ್ಳಿ ತಮ್ಮ ಕುರ್ಚಿಯಿಂದ ಮೇಲೇಳಲು, ಸ್ಪಷ್ಟವಾಗಿ ಮಾತನಾಡಲು ಹಾಗೂ ಸಭ್ಯವಾಗಿ ವರ್ತಿಸಲು ಪ್ರಯಾಸ ಪಡುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ವಿನೋದ್ ಕಾಂಬ್ಳಿಯ ಈಗಿನ ಪರಿಸ್ಥಿತಿಯನ್ನು ಕಂಡ ಅಭಿಮಾನಿಗಳು, ಆರ್ಥಿಕ ಮುಗ್ಗಟ್ಟನ್ನೂ ಎದುರಿಸುತ್ತಿರುವ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಇದರ ಬೆನ್ನಿಗೇ, ಕಾಂಬ್ಳಿಗೆ ನೆರವು ನೀಡಲು 1983ರ ವಿಶ್ವಕಪ್ ವಿಜೇತ ತಂಡವು ಬಯಸುತ್ತಿದೆ ಎಂಬ ಸಂಗತಿಯನ್ನು ಮಾತುಕತೆಯೊಂದರಲ್ಲಿ ಸುನೀಲ್ ಗಾವಸ್ಕರ್ ಬಹಿರಂಗಪಡಿಸಿದ್ದಾರೆ.

“ನಮ್ಮ ಯುವ ಆಟಗಾರರ ಬಗ್ಗೆ 1983ರ ತಂಡವು ತುಂಬಾ ಎಚ್ಚರವಾಗಿದೆ. ಅವರು ನಮ್ಮ ಮಕ್ಕಳಿದ್ದಂತೆ. ಭವಿಷ್ಯ ಮಂಕಾದ ಕ್ರಿಕಟಿಗರ ಬಗ್ಗೆ ನಾವು ತುಂಬಾ ಕಾಳಜಿ ಹೊಂದಿದ್ದೇವೆ. ಹೀಗಾಗಿ, ನಾನು ಆತನಿಗೆ ಸಹಾಯ ಮಾಡುತ್ತೇನೆ ಎಂದು ಹೇಳುವುದು ಸರಿಯೆನಿಸದು. ಆತನನ್ನು ಆರೈಕೆ ಮಾಡಿ, ಆತ ಮತ್ತೆ ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡಲು 83ರ ತಂಡ ಬಯಸುತ್ತಿದೆ. ನಾವದನ್ನು ಹೇಗೆ ಮಾಡಲಿದ್ದೇವೆ ಎಂಬುದು ಶೀಘ್ರದಲ್ಲೇ ತಿಳಿಯಲಿದೆ. ಕೆಲವು ಬಾರಿ ದುರದೃಷ್ಟದ ಕಾಕದೃಷ್ಟಿಗೆ ಒಳಗಾಗಿ, ಭವಿಷ್ಯವನ್ನು ಮಂಕಾಗಿಸಿಕೊಂಡಿರುವ ಕೆಲವು ಕ್ರಿಕೆಟಿಗರ ಬಳಿ ಆತನನ್ನು ಕರೆದೊಯ್ಯಲು ನಾವು ಬಯಸುತ್ತಿದ್ದೇವೆ. 83ರ ತಂಡ ಮಾಡಲು ಬಯಸುತ್ತಿರುವುದು ಅದನ್ನೇ” ಎಂದು India Today ಸುದ್ದಿ ಸಂಸ್ಥೆಗೆ ಸುನೀಲ್ ಗಾವಸ್ಕರ್ ತಿಳಿಸಿದ್ದಾರೆ.

ರಮಾಕಾಂತ್ ಅಚರೇಕರ್ ಸನ್ಮಾನ ಸಮಾರಂಭದಲ್ಲಿ ತನ್ನ ಬಾಲ್ಯದ ಸ್ನೇಹಿತ ಸಚಿನ್ ತೆಂಡೂಲ್ಕರ್ ರನ್ನು ಗುರುತು ಹಿಡಿಯಲು ವಿನೋದ್ ಕಾಂಬ್ಲಿ ಕೆಲ ನಿಮಿಷಗಳನ್ನೇ ತೆಗೆದುಕೊಂಡಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಅಭಿಮಾನಿಗಳಿಂದ ಭಾರಿ ಕಳವಳ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News