ಏಶ್ಯಕಪ್ ಸೂಪರ್-4 ಪಂದ್ಯ: ಪಾಕಿಸ್ತಾನ-ಶ್ರೀಲಂಕಾ 252 ರನ್ ಗಳಿಸಿದ್ದರೂ ಬಾಬರ್ ಬಳಗ ಸೋತಿದ್ದೇಕೆ?
ಕೊಲಂಬೊ: ಏಶ್ಯ ಕಪ್ 2023 ರ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯವು ರೋಚಕವಾಗಿ ಕೊನೆಯ ಓವರ್ ನಲ್ಲಿ ಕೊನೆಗೊಂಡಿದೆ. ಪಂದ್ಯದ ಕೊನೆಯ ಎಸೆತದಲ್ಲಿ ದಸುನ್ ಶನಕ ಬಳಗ 2 ವಿಕೆಟ್ ಗಳ ಗೆಲುವು ಸಾಧಿಸಿದೆ. ಮಳೆಯಿಂದಾಗಿ ಪಂದ್ಯವನ್ನು ಪ್ರತಿ ತಂಡಕ್ಕೆ 42 ಓವರ್ ಗಳಿಗೆಇಳಿಸಿದ ನಂತರ ಪಾಕಿಸ್ತಾನವು ಶ್ರೀಲಂಕಾ ತಂಡದ ಗೆಲುವಿಗೆ 252 ರನ್ ಗಳ ಗುರಿಯನ್ನು ನೀಡಿತು.. ಶ್ರೀಲಂಕಾ 42 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿ ಗೆಲುವಿನ ದಡ ಸೇರಿತು.
ಆದಾಗ್ಯೂ, ಪಂದ್ಯಕ್ಕೆ ಸಂಬಂಧಿಸಿದಂತೆ ಗೊಂದಲವು ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದೆ, ಏಕೆಂದರೆ ಪಾಕಿಸ್ತಾನ ಹಾಗೂ ಶ್ರೀಲಂಕಾ ಎರಡೂ ಸ್ಕೋರ್ ಬೋರ್ಡ್ ನಲ್ಲಿ 252 ರ ನ್ ಗಳನ್ನು ಹಾಕುವಲ್ಲಿ ಯಶಸ್ವಿಯಾದವು. ಆದರೂ, ಪಂದ್ಯವು ದ್ವೀಪರಾಷ್ಟ್ರ ದ ಪರವಾಯಿತು.
ಗುರುವಾರ ಕೊಲಂಬೊದ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ಆರಂಭಕ್ಕೂ ಮುನ್ನವೇ ಮಳೆ ಆರಂಭವಾಗಿದ್ದು, ಟಾಸ್ ಹಾಗೂ ಪಂದ್ಯದ ಆರಂಭ ವಿಳಂಬವಾಯಿತು.
ಪಂದ್ಯ ಆರಂಭವಾದಾಗ ಪ್ರತಿ ತಂಡವು 45 ಓವರ್ ಬ್ಯಾಟಿಂಗ್ ಮಾಡಲಿದೆ ಎಂದು ಘೋಷಿಸಲಾಗಿತ್ತು. ಆದರೆ, ಮತ್ತೆ ಮಳೆ ಸುರಿಯಿತು, ಅಧಿಕಾರಿಗಳು ಪಂದ್ಯವನ್ನು ಪ್ರತಿ ತಂಡಕ್ಕೆ 42 ಓವರ್ಗಳಿಗೆ ಕಡಿಮೆ ಮಾಡಿದರು. ಪಾಕಿಸ್ತಾನ 27.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಎರಡನೇ ಬಾರಿಗೆ ಮಳೆ ಸುರಿಯಿತು, ಆಗ ಪಂದ್ಯವನ್ನು 42 ಓವರ್ ಗಳ ಸ್ಪರ್ಧೆಯಾಗಿ ಮುಂದುವರಿಸಲಾಯಿತು.
ಪಾಕಿಸ್ತಾನದ ಪರಿಷ್ಕೃತ ಮೊತ್ತ 251 ರನ್ ಆಗಿದ್ದು ಏಕೆ?
ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ 42 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 252 ರನ್ ಕಲೆ ಹಾಕಿತು. ಆಗ, ಡಕ್ವರ್ತ್-ಲೂಯಿಸ್ ಲೆಕ್ಕಾಚಾರದ ಭಾಗವಾಗಿ ಪಾಕ್ ಸ್ಕೋರ್ ನಿಂದ 1 ರನ್ ಕಡಿತಗೊಳಿಸಲಾಯಿತು. ಪಂದ್ಯಕ್ಕೆ ಎರಡನೇ ಬಾರಿ ಮಳೆ ಅಡ್ಡಿಪಡಿಸುವ ಮೊದಲು ಪಾಕಿಸ್ತಾನ 5 ವಿಕೆಟ್ಗಳನ್ನು ಕಳೆದುಕೊಂಡಿದ್ದರಿಂದ 1 ರನ್ ಕಡಿತ ಮಾಡಲಾಗಿದೆ. ಆದ್ದರಿಂದ ಪಾಕಿಸ್ತಾನದ ಅಂತಿಮ ಮೊತ್ತವು 251 ರನ್ ಗೆ ಕುಸಿಯಿತು, ಶ್ರೀಲಂಕಾಗೆ ಆಗ ಪಂದ್ಯವನ್ನು ಗೆಲ್ಲಲು 252 ರನ್ಗಳ ಅಗತ್ಯವಿತ್ತು..
28ನೇ ಓವರ್ ನಲ್ಲಿ ಮಳೆ ಪಂದ್ಯಕ್ಕೆ ಅಡ್ಡಿಯಾಗುವ ಮೊದಲು ಪಾಕಿಸ್ತಾನವು ಮುಹಮ್ಮದ್ ನವಾಝ್ ಅವರ ವಿಕೆಟ್ ಅನ್ನು ಕಳೆದುಕೊಳ್ಳದೆ ಇರುತ್ತಿದ್ದರೆ, ಶ್ರೀಲಂಕಾದ ಗುರಿ 252 ರ ಬದಲಿಗೆ 255 ರನ್ ಆಗುತ್ತಿತ್ತು. DLS ಲೆಕ್ಕಾಚಾರಕ್ಕೆ ಬಂದಾಗ, ಕೈಯಲ್ಲಿ ವಿಕೆಟ್ ಇಟ್ಟುಕೊಳ್ಳುವುದು ತಂಡಗಳಿಗೆ ನಿರ್ಣಾಯಕವಾಗಿದೆ.
ಮಳೆ-ಬಾಧಿತ ಪಂದ್ಯಗಳ ವಿಷಯಕ್ಕೆ ಬಂದಾಗ, ಉತ್ತಮ ಆರಂಭವನ್ನು ಪಡೆಯುವುದು ತಂಡಗಳಿಗೆ ಬಹಳ ಮುಖ್ಯವಾಗಿದೆ. ಆರಂಭಿಕ ವಿಕೆಟ್ ಗಳನ್ನು ಕಳೆದುಕೊಳ್ಳುವುದು ಉತ್ತಮ ಪರಿಷ್ಕೃತ ಮೊತ್ತವನ್ನು ಪಡೆಯುವ ತಂಡಗಳ ಅವಕಾಶಗಳಿಗೆ ಧಕ್ಕೆವುಂಟು ಮಾಡುತ್ತದೆ.
ಪಾಕಿಸ್ತಾನ ಕೊನೆಯ ತನಕ ಗೆಲುವಿಗಾಗಿ ಹೋರಾಟವನ್ನು ನೀಡಿತು. ಫೈನಲ್ ಗೆ ಲಗ್ಗೆ ಇಡಲು ಲಂಕಾಗೆ ಅಂತಿಮ 2 ಎಸೆತಗಳಲ್ಲಿ 6 ರನ್ ಗಳ ಅಗತ್ಯವಿತ್ತು, ಬ್ಯಾಟಿಂಗ್ ಆಲ್ ರೌಂಡರ್ ಚರಿತ್ ಅಸಲಂಕಾ(ಔಟಾಗದೆ 49 ) ತಮ್ಮ ತಂಡಕ್ಕೆ ಗೆಲುವಿನ ರನ್ ಗಳಿಸಿದರು ಹಾಗೂ ಭಾರತದ ವಿರುದ್ಧ ಏಶ್ಯ ಕಪ್ 2023 ರ ಅಂತಿಮ ಹಣಾಹಣಿಗೆ ತಂಡವನ್ನು ಕೊಂಡೊಯ್ದರು.