ಸೂಪರ್ ಸ್ಟಾರ್ ಸಿಮೋನ್ ಬೈಲ್ಸ್

Update: 2024-08-04 10:03 GMT

ಸಿಮೋನ್ ಅರಿಯನ್ ಬೈಲ್ಸ್ !

ಒಲಿಂಪಿಕ್ಸ್ ಕ್ರೀಡೆಗಳನ್ನು ಆಸಕ್ತಿಯಿಂದ ಗಮನಿಸುವವರಿಗೆ ಮತ್ತು ಜಿಮ್ನಾಸ್ಟಿಕ್‌ನಲ್ಲಿ ಆಸಕ್ತಿ ಇರುವವರಿಗೆ ಸೂಪರ್ ಸ್ಟಾರ್ ಸಿಮೋನ್ ಬೈಲ್ಸ್ ಹೆಸರು ಕೇಳದೇ ಇರುವುದು ಸಾಧ್ಯವೇ ಇಲ್ಲ!

23 ಚಿನ್ನದ ಪದಕಗಳು ಸೇರಿದಂತೆ ಒಟ್ಟು 30 ವಿಶ್ವ ಚಾಂಪಿಯನ್‌ಶಿಪ್ ಪದಕಗಳು, 6 ಚಿನ್ನದ ಪದಕಗಳು ಸೇರಿದಂತೆ 9 ಒಲಿಂಪಿಕ್ಸ್ ಪದಕಗಳನ್ನು ಗೆದ್ದಿರುವ ಸಿಮೋನ್ ಬೈಲ್ಸ್, ಜೂನಿಯರ್ ಮತ್ತು ಸೀನಿಯರ್ ಜಿಮ್ನಾಸ್ಟಿಕ್‌ಕ್ರೀಡಾ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗಿದ್ದಾರೆ.

ಅಮೆರಿಕದ ಕೊಲಂಬಸ್-ಒಹಿಯೋ ನಗರದಲ್ಲಿ ಸರಿಯಾದ ಓದು, ಉದ್ಯೋಗ ಇಲ್ಲದ ಕಪ್ಪು ವರ್ಣೀಯ ಯುವತಿಯೊಬ್ಬಳು ಡ್ರಗ್ಸ್, ಕುಡಿತ ವ್ಯಸನಿಯಾಗಿ ಸಾಲುಸಾಲಾಗಿ ನಾಲ್ಕು ಹೆಣ್ಣುಮಕ್ಕಳಿಗೆ ಜನ್ಮ ಕೊಡುತ್ತಾಳೆ. ಉದ್ಯೋಗವೇ ಇಲ್ಲದೆ, ತುತ್ತು ಅನ್ನಕ್ಕೂ ಒದ್ದಾಡುತ್ತಿದ್ದ ಯುವತಿಯಿಂದ ಆಕೆಯ ಮಕ್ಕಳನ್ನು ಬಿಡಿಸಿ ಸ್ಥಳೀಯ ಅನಾಥಾಲಯಕ್ಕೆ ಸೇರಿಸಲಾಗುತ್ತದೆ. ಆ ನತದೃಷ್ಟ ಮಕ್ಕಳ ಪೈಕಿ ಮೂರನೆಯವಳೇ ಸಿಮೋನ್ ಬೈಲ್ಸ್!

ಬಾಲ್ಯದಲ್ಲಿ ತಂದೆ ತಾಯಿಗಳ ಪ್ರೀತಿ ದೊರಕದೆ, ತನ್ನ ಸಹೋದರಿಯರ ಜೊತೆಗೆ ಅನಾಥಾಲಯದಲ್ಲಿ ಕಷ್ಟಕರ ಬಾಲ್ಯ ಕಳೆದ ಸಿಮೋನ್, ಒಮ್ಮೆ ಅನಾಥಾಲಯದ ಮಕ್ಕಳು ಪ್ರವಾಸ ಹೋಗಿದ್ದಾಗ, ಬರೀ ಆರು ವರ್ಷದ ಹುಡುಗಿ ಸಿಮೋನ್ ಜಿಮ್ನಾಸ್ಟಿಕ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಳು, ತಮಾಷೆಗಾಗಿ ಟ್ರಯಲ್ ಮಾಡಿದ ಸಿಮೋನ್‌ಳ ಸಹಜ ಸಾಮರ್ಥ್ಯಕ್ಕೆ ಜಿಮ್ನಾಸ್ಟಿಕ್‌ನ ತರಬೇತು ದಾರರೇ ಬೆರಗಾಗಿಬಿಟ್ಟರು.

ಇದೇ ಸಮಯಕ್ಕೆ ಸರಿಯಾಗಿ ಸಿಮೋನ್ ಮತ್ತು ಸೋದರಿಯರ ಕಷ್ಟ ನೋಡಲಾರದೆ ಸಿಮೋನ್‌ಳ ಅಜ್ಜ ಮತ್ತು ಅವರ ಎರಡನೇ ಹೆಂಡತಿ, ಸಿಮೋನ್‌ಳ ದೊಡ್ಡಮ್ಮ, ಚಿಕ್ಕಮ್ಮಂದಿರು ಸಿಮೋನ್ ಸೋದರಿಯರನ್ನು ದತ್ತು ಪಡೆದರು.

ಸಿಮೋನ್‌ಳ ಅಜ್ಜ ರೋನ್ ಬೈಲ್ಸ್ ಮತ್ತು ಅವರ ಹೆಂಡತಿ ನೆಲ್ಲಿ ಕಾಯ್ತೆನೊ ಇಬ್ಬರೂ ಸಿಮೋನ್ ಮತ್ತವಳ ಸೋದರಿ ಆಡ್ರಿಯಾ ಜೊತೆಗೆ ಟೆಕ್ಸಾಸ್‌ಗೆ ಬಂದು ನೆಲೆಸಿದರು. ಸಿಮೋನ್ ಬೈಲ್ಸ್ ಎಂಟು ವರ್ಷಗಳ ಹುಡುಗಿಯಾಗಿದ್ದಾಗಿನಿಂದ ಆಕೆಯನ್ನು ಗುರುತಿಸಿ, ಸರಿಯಾದ ತರಬೇತಿ ನೀಡಲು ಶುರುಮಾಡಿದ ಜಿಮ್ನಾಸ್ಟಿಕ್ಸ್ ಕೋಚ್ ಆ್ಯಮಿ ಬ್ರೂಮನ್ ಆಕೆಯನ್ನು ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟುವನ್ನಾಗಿ ರೂಪಿಸಿದರು.

2016ರ ರಿಯೋ ಒಲಿಂಪಿಕ್ಸ್‌ನ ನಂತರ ಚಿನ್ನದ ಪದಕ ಬಿಟ್ಟು ಬೇರೆ ಏನನ್ನೂ ಗೆಲ್ಲದ ಸಿಮೋನ್ ಬೈಲ್ಸ್ ಯಶಸ್ಸಿನ ಮೌಂಟ್ ಎವರೆಸ್ಟ್ ಏರಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ, ಇಡೀ ಜಗತ್ತೇ ಸಿಮೋನ್ ಎಷ್ಟು ಚಿನ್ನ ಗೆಲ್ಲಲಿದ್ದಾರೆ ಎಂದು ಲೆಕ್ಕಾಚಾರ ಹಾಕುವಾಗ, ಅಚಾನಕ್ಕಾಗಿ ಮನಸ್ಸು ಮತ್ತು ದೇಹದ ತಾಳಮೇಳ ತಪ್ಪಿ, ಇಡೀ ಜೀವನದ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಕಡೆಗೆ ಮಾನಸಿಕ ಸಮಸ್ಯೆ ಮತ್ತು ಒತ್ತಡ ತಾಳಲಾರದೆ ಅಮೆರಿಕ ರಾಷ್ಟ್ರೀಯ ತಂಡವನ್ನು ತೊರೆದರು. ಟೋಕಿಯೋದಲ್ಲಿ ಸಿಮೋನ್ ಬೈಲ್ಸ್ ಪ್ರದರ್ಶನ ಇಡೀ ಕ್ರೀಡಾ ಜಗತ್ತನ್ನೇ ಆಘಾತಕ್ಕೆ ತಳ್ಳಿತು. ಸಿಮೋನ್ ಈ ಸೋಲಿನಿಂದ ತತ್ತರಿಸಿಬಿಟ್ಟರು.

ಬಾಯ್ ಫ್ರೆಂಡ್ ಜೊತೆಗಿನ ಬ್ರೇಕ್‌ಅಪ್, ಅಮೆರಿಕದ ರಾಷ್ಟ್ರೀಯ ಜಿಮ್ನಾಸ್ಟಿಕ್ ತಂಡದ ಫಿಸಿಯೋನಿಂದ ಲೈಂಗಿಕ ಕಿರುಕುಳ, ಅಮೆರಿಕದ ಕ್ರೀಡಾ ಇಲಾಖೆ ಮತ್ತು ಅಮೆರಿಕದ ಒಲಿಂಪಿಕ್ಸ್ ಸಂಸ್ಥೆಯ ಅಧಿಕಾರಿಗಳ ಅಸಹಕಾರ, ಕಿರುಕುಳ ಎಲ್ಲವೂ ಸಿಮೋನ್‌ರನ್ನು ಜಿಮ್ನಾಸ್ಟಿಕ್‌ನಿಂದ ಹೆಚ್ಚು ಕಮ್ಮಿ ದೂರವೇ ಮಾಡಿಬಿಟ್ಟಿತ್ತು.

ಆದರೆ ಜೀವನದುದ್ದಕ್ಕೂ ಸವಾಲುಗಳನ್ನು, ಕಷ್ಟಗಳನ್ನೇ ಎದುರಿಸಿಕೊಂಡು ಬಂದಿದ್ದ ಸಿಮೋನ್ ಬೈಲ್ಸ್, ಫೀನಿಕ್ಸ್ ಹಕ್ಕಿಯಂತೆ ಮೇಲೆದ್ದು ಬಂದು ಹೊಸ ವಿಶ್ವದಾಖಲೆಯೊಂದಿಗೆ ಈ ಬಾರಿಯ ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಈಗಾಗಲೇ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ತಾನೇಕೆ ಸಾರ್ವಕಾಲಿಕ ಶ್ರೇಷ್ಠ ಕ್ರೀಡಾಪಟು ಅಂತ ಸಾಬೀತು ಮಾಡಿದ್ದಾರೆ.

ಕ್ರೀಡಾಪಟುಗಳಿಗೆ ಮಾನಸಿಕ ಆರೋಗ್ಯ ಎಷ್ಟು ಮುಖ್ಯ ಎಂದು ಪ್ರತಿಪಾದಿಸುವ ಸಿಮೋನ್ ಬೈಲ್ಸ್, ಇತರ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲು ತಾನು ಎದುರಿಸಿದ ಕಷ್ಟಗಳು, ಅವುಗಳನ್ನು ಎದುರಿಸಿದ ರೀತಿ ಎಲ್ಲವನ್ನೂ ವಿವರಿಸಿ ಅouಡಿಚಿge ಣo Soಚಿಡಿ ಎಂಬ ಆತ್ಮಕತೆಯನ್ನೂ ಬರೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ದರ್ಶನ್ ಜೈನ್

contributor

Similar News