ಟಿ20 ವಿಶ್ವಕಪ್: ಜೂನ್ 1ಕ್ಕೆ ಬಾಂಗ್ಲಾ ವಿರುದ್ಧ ಅಮೆರಿಕದಲ್ಲಿ ಭಾರತ ಅಭ್ಯಾಸ ಪಂದ್ಯ

Update: 2024-05-17 03:56 GMT

Photo: PTI

ಹೊಸದಿಲ್ಲಿ: ವಿಶ್ವಕಪ್ ಪಂದ್ಯಾವಳಿಯ ಪೂರ್ವಭಾವಿಯಾಗಿ ಭಾರತದ ಟಿ20 ತಂಡ ಅಮೆರಿಕದಲ್ಲಿ ಜೂನ್ 1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯ ಆಡಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗುರುವಾರ ಪ್ರಕಟಿಸಿದೆ.

2007ನೇ ಇಸವಿಯ ಆರಂಭಿಕ ಟಿ-20 ವಿಶ್ವಕಪ್ ಚಾಂಪಿಯನ್ ಆಗಿರುವ ಭಾರತ ತಂಡದ ನೇತೃತ್ವವನ್ನು ರೋಹಿತ್ ಶರ್ಮಾ ವಹಿಸುವರು. ವೆಸ್ಟ್ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಿರುವ ಟೂರ್ನಿಯಲ್ಲಿ ಭಾರತ ತಂಡದ ಮೇಲೆ ಭಾರಿ ನಿರೀಕ್ಷೆ ಇದೆ.

ಮೇ 27ರಿಂದ ಜೂನ್ 1ರವರೆಗೆ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯಗಳು ಅಮೆರಿಕ ಹಾಗೂ ಟ್ರಿನಿಡಾಟ್ & ಟೊಬಾಗೊದಲ್ಲಿ ನಡೆಯಲಿದೆ. ಟೆಕ್ಸಾಸ್ನ ಗ್ರ್ಯಾಂಡ್ ಪ್ರೈರಿ ಕ್ರಿಕೆಟ್ ಸ್ಟೇಡಿಯಂ, ಫ್ಲೋರಿಡಾದ ಬ್ರೊವಾರ್ಡ್ ಕೌಂಟಿ ಸ್ಟೇಡಿಯಂ ಹಾಗೂ ಟ್ರಿನಿಡಾಡ್ ಮತ್ತು ಟೊಬಾಗೊದ ಕ್ವೀನ್ಸ್ ಪಾರ್ಕ್ ಓವಲ್ ಹಾಗೂ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ.

ದಕ್ಷಿಣ ಆಫ್ರಿಕಾ ಸೇರಿದಂತೆ 17 ತಂಡಗಳು ಅಭ್ಯಾಸ ಪಂದ್ಯಗಳಲ್ಲಿ ಭಾಗವಹಿಸಲಿವೆ. ಅದರೆ ಈ 20 ಓವರ್ ಗಳ ಪಂದ್ಯಕ್ಕೆ ಅಂತಾರಾಷ್ಟ್ರೀಯ ಟಿ20 ಮಾನ್ಯತೆ ಇರುವುದಿಲ್ಲ. ಇಲ್ಲಿ ಇಡೀ 15 ಆಟಗಾರರ ತಂಡವನ್ನು ಬಳಸಿಕೊಳ್ಳಲು ಅವಕಾಶ ಇರುತ್ತದೆ.

ಪ್ರತಿ ತಂಡಗಳು ಆಗಮಿಸುವ ಸಮಯ ಮತ್ತು ಮುಖ್ಯ ಪಂದ್ಯಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಅಭ್ಯಾಸ ಪಂದ್ಯಗಳನ್ನು ಆಡಲು ಅವಕಾಶ ಇರುತ್ತದೆ. ಆಸ್ಟ್ರೇಲಿಯಾ ಮತ್ತು ವೆಸ್ಟ್ಇಂಡೀಸ್ ನಡುವೆ ಮೇ 30ರಂದು ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆಯುವ ಪಂದ್ಯ ಅಭಿಮಾನಿಗಳಿಗೆ ಮುಕ್ತವಾಗಿರುತ್ತದೆ.

ಪಂದ್ಯಗಳಿಗೆ ಟಿಕೆಟ್ ಗಳನ್ನು ಮೇ 16ರಿಂದಲೇ ವೆಬ್ ಸೈಟ್ ಮತ್ತು ಬಾಕ್ಸ್ ಆಫೀಸ್ ಗಳಲ್ಲಿ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಜೂನ್ 1ರಂದು ಟೂರ್ನಿಗೆ ಅಧಿಕೃತ ಚಾಲನೆ ದೊರಕಲಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News