ಯುಎಇನಲ್ಲಿ ಎರಡನೇ ಹಂತದ ಐಪಿಎಲ್ ಟೂರ್ನಿ?
ಮುಂಬೈ: ಐಪಿಎಲ್ ಹಾಗೂ ದೇಶದ ಸಾರ್ವತ್ರಿಕ ಚುನಾವಣೆ ಒಂದೇ ಸಮಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಟೂರ್ನಿಯ ಎರಡನೇ ಹಂತವು ದುಬೈನಲ್ಲಿ ನಡೆಯುವ ಸಾಧ್ಯತೆ ಇದೆ.
ಭಾರತದ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿರುವುದರಿಂದ ಐಪಿಎಲ್ ಪಂದ್ಯಗಳನ್ನು ದುಬೈಗೆ ಸ್ಥಳಾಂತರಿಸಬೇಕೇ ಎಂಬ ಕುರಿತಂತೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಲಿದೆ. ಐಪಿಎಲ್ ನ ಎರಡನೇ ಹಂತವನ್ನು ದುಬೈನಲ್ಲಿ ಆಯೋಜಿಸುವ ಕುರಿತಂತೆ ಚರ್ಚಿಸಲು ಬಿಸಿಸಿಐನ ಕೆಲವು ಹಿರಿಯ ಅಧಿಕಾರಿಗಳು ಸದ್ಯ ದುಬೈನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೆಲವು ಐಪಿಎಲ್ ತಂಡಗಳು ತಮ್ಮ ಆಟಗಾರರಲ್ಲಿ ತಮ್ಮಲ್ಲಿನ ಪಾಸ್ಪೋರ್ಟ್ಗಳನ್ನು ಸಲ್ಲಿಸುವಂತೆ ಸೂಚಿಸಿದೆ ಎಂದು ಮಾಧ್ಯಮದಲ್ಲಿ ವರದಿಯಾಗಿದೆ.
ಟೂರ್ನಿಯು ದೇಶದ ಹೊರಗಿನ ಸ್ಥಳಕ್ಕೆ ಸ್ಥಳಾಂತರವಾಗಲಿದೆ ಎಂಬ ವದಂತಿಯೂ ಹರಿಡಿದೆ. 2014ರಲ್ಲಿ ಸಾರ್ವತ್ರಿಕ ಚುನಾವಣೆಯ ಕಾರಣಕ್ಕೆ ಐಪಿಎಲ್ ನ ಮೊದಲಾರ್ಧವು ಯುಎಇನಲ್ಲಿ ನಡೆದಿತ್ತು.
ಬಿಸಿಸಿಐ ಈಗಾಗಲೇ ಈ ವರ್ಷದ ಐಪಿಎಲ್ ನ ಮೊದಲಾರ್ಧದ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ 21 ಪಂದ್ಯಗಳು ಸೇರಿವೆ. ಈ ವೇಳಾಪಟ್ಟಿಯ ಪ್ರಕಾರ ಕೊನೆಯ ಪಂದ್ಯವು ಎಪ್ರಿಲ್ 7ರಂದು ಲಕ್ನೊದಲ್ಲಿ ಲಕ್ನೊ ಸೂಪರ್ ಜಯಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ನಡೆಯಲಿದೆ.
17ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಚೆನ್ನೈನಲ್ಲಿ ಮಾರ್ಚ್ 22ರಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಮೂಲಕ ಆರಂಭವಾಗಲಿದೆ.
2020ರಲ್ಲಿ ಕೊನೆಯ ಬಾರಿ ಯುಎಇನಲ್ಲಿ ಐಪಿಎಲ್ ಟೂರ್ನಿಯು ನಡೆದಿತ್ತು. ಆಗ ದುಬೈ, ಅಬುಧಾಬಿ ಹಾಗೂ ಶಾರ್ಜಾಗಳಲ್ಲಿ ಪಂದ್ಯಗಳು ನಡೆದಿದ್ದವು. ಭಾರತದಲ್ಲಿ ಕೋವಿಡ್-19 ಹಾವಳಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಯುಎಇನಲ್ಲಿ ಐಪಿಎಲ್ ಆಯೋಜಿಸಲಾಗಿತ್ತು.