ಕಪಿಲ್ ದೇವ್‌ಗೆ ಕೈಕೊಳ ಹಾಕಿದ ವೀಡಿಯೊ ವೈರಲ್!
ಮುಂಬೈ : ಭಾರತದ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರಿಗೆ ಕೈಕೋಳ ಹಾಕಿದ ಇತ್ತೀಚಿನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕಪಿಲ್ ಅವರ ಯೋಗಕ್ಷೇಮದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ವೀಡಿಯೊದಲ್ಲಿ, ಇಬ್ಬರು ಅಪರಿಚಿತ ವ್ಯಕ್ತಿಗಳು ಕಪಿಲ್ ದೇವ್ ಅವರನ್ನು ಬಲವಂತವಾಗಿ ಕೋಣೆಗೆ ಕರೆದೊಯ್ಯುತ್ತಿರುವುದು ಕಾಣುತ್ತದೆ. ಗಂಭೀರ್ ಸೇರಿದಂತೆ ಸಾಮಾಜಿಕ ಜಾಲತಾಣ ಬಳಕೆದಾದರರು ಈ ವೀಡಿಯೊದ ಸ್ವರೂಪವನ್ನು ಪ್ರಶ್ನಿಸಿದ್ದು, ಇದು ನಿಜವಾದ ದೃಶ್ಯವೇ ಅಥವಾ ಇದು ವಿಸ್ತಾರವಾದ ಜಾಹೀರಾತು ಆಗಿರಬಹುದೇ? ಎಂದು ಪ್ರಶ್ನಿಸಿದ್ದಾರೆ.
"ಈ ಕ್ಲಿಪ್ ಅನ್ನು ಬೇರೆ ಯಾರಾದರೂ ಸ್ವೀಕರಿಸಿದ್ದಾರೆಯೇ? ಇದರಲ್ಲಿರುವುದು ನಿಜವಾಗಿ @therealkapildev ಅಲ್ಲ ಮತ್ತು ಕಪಿಲ್ ಅವರು ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇವೆ!," ಎಂದು ಗಂಭೀರ್ X ನಲ್ಲಿ ಪೋಸ್ಟ್ ಮಾಡಿದ್ದರು.
ಈ ವೀಡಿಯೊ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನ ಪ್ರೋಮೋ ಶೂಟ್‌ನ ಭಾಗವಾಗಿತ್ತು ಎಂದು ಈಗ ಸ್ಪಷ್ಟಪಡಿಸಲಾಗಿದೆ.
"ಅರೇ @therealkapildev ಅವರೇ, ಚೆನ್ನಾಗಿ ನಟಿಸಿದ್ದೀರಿ! ನಟನೆಯ ವಿಶ್ವಕಪ್ ಕೂಡಾ ನೀವೇ ಜಯಿಸುತ್ತೀರಿ! ಈಗ ಪುರುಷರ ICC ಕ್ರಿಕಟ್ ವಿಶ್ವಕಪ್ @DisneyPlusHS ಮೊಬೈಲ್‌ನಲ್ಲಿ ಉಚಿತವಾಗಿದೆ" ಎಂದು ಗಂಭೀರ್ ಮಂಗಳವಾರ ಪೋಸ್ಟ್ ಮಾಡಿದ್ದಾರೆ.
1978 ರಲ್ಲಿ ಪಾಕಿಸ್ತಾನದ ವಿರುದ್ಧ ಅಂತರರಾಷ್ಟ್ರೀಯ ಕ್ರಿಕಟ್ ಗೆ ಪಾದಾರ್ಪಣೆ ಮಾಡಿದ ಕಪಿಲ್ ದೇವ್, ಭಾರತ ಪರ 131 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 5,248 ರನ್ ಗಳಿಸಿ 438 ವಿಕೆಟ್ ಕಬಳಿಸಿದ್ದಾರೆ.
225 ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ,253 ವಿಕೆಟ್‌ಗಳನ್ನು ಕಬಳಿಸಿದ್ದಾರೆ 3,783 ರನ್‌ಗಳನ್ನು ಗಳಿಸಿದ್ದಾರೆ.
ಏಕದಿನ ಕ್ರಿಕಟ್‌ನಲ್ಲಿ ದೇವ್ ಕೇವಲ ಒಂದು ಶತಕವನ್ನು ಗಳಿಸಿದ್ದಾರೆ. 1983 ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ ವಿರುದ್ಧ 175 ರನ್‌ಗಳ ಅವರ ಶತಕ ಇಂದಿಗೂ ಪ್ರಸಿದ್ದಿ.