ಮೂರನೇ ಟೆಸ್ಟ್: ಆಮಿರ್ ಜಮಾಲ್‌ ಗೆ ಆರು ವಿಕೆಟ್ ಗೊಂಚಲು ಪಾಕಿಸ್ತಾನಕ್ಕೆ ಅಲ್ಪ ಮುನ್ನಡೆ, ತಿರುಗೇಟು ನೀಡಿದ ಆಸ್ಟ್ರೇಲಿಯ

Update: 2024-01-05 16:51 GMT

ಆಮಿರ್ ಜಮಾಲ್ | Photo: @TheRealPCB \ X

ಸಿಡ್ನಿ: ಬಲಗೈ ಮಧ್ಯಮ ವೇಗದ ಬೌಲರ್ ಆಮಿರ್ ಜಮಾಲ್ 69 ರನ್‌ ಗೆ ಆರು ವಿಕೆಟ್‌ ಗಳನ್ನು ಕಬಳಿಸಿದ್ದು ಶುಕ್ರವಾರ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಆಸ್ಟ್ರೇಲಿಯ ವಿರುದ್ಧ ಅಲ್ಪ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಗಿದೆ.

ಆದಾಗ್ಯೂ ಜೋಶ್ ಹೇಝಲ್ವುಡ್ ನೇತೃತ್ವದಲ್ಲಿ ಆಸ್ಟ್ರೇಲಿಯದ ಬೌಲರ್‌ ಗಳು ಪ್ರಬಲ ಪ್ರತಿರೋಧ ಒಡ್ಡಿದ್ದು ಇನ್ನೆರಡು ದಿನಗಳ ಆಟ ಬಾಕಿ ಇರುವಾಗ ಪಂದ್ಯವು ಸಮತೋಲಿತವಾಗಿದೆ.

ವೇಗದ ಬೌಲರ್ ಹೇಝಲ್ವುಡ್(4-9)ಮೂರು ನಿರ್ಣಾಯಕ ವಿಕೆಟ್‌ ಗಳು ಸೇರಿದಂತೆ ಕೇವಲ 9 ರನ್‌ ಗೆ ನಾಲ್ಕು ವಿಕೆಟ್‌ ಗಳನ್ನು ಉಡಾಯಿಸಿ ಪಂದ್ಯದಲ್ಲಿ ಆಸ್ಟ್ರೇಲಿಯವು ತಿರುಗೇಟು ನೀಡಲು ನೆರವಾದರು. ಮೂರನೇ ದಿನದಾಟದಂತ್ಯಕ್ಕೆ ಪಾಕಿಸ್ತಾನವು 68 ರನ್‌ ಗೆ 7 ವಿಕೆಟ್‌ ಗಳನ್ನು ಕಳೆದುಕೊಂಡು ಪರದಾಟ ನಡೆಸುತ್ತಿದ್ದು, ಕೇವಲ 82 ರನ್ ಮುನ್ನಡೆಯಲ್ಲಿದೆ. ಕೈಯಲ್ಲಿ ಮೂರು ವಿಕೆಟ್‌ ಗಳನ್ನು ಮಾತ್ರ ಹೊಂದಿದೆ.

ಮುಹಮ್ಮದ್ ರಿಝ್ವಾನ್(ಔಟಾಗದೆ 6) ಹಾಗೂ ಆಮಿರ್ ಜಮಾಲ್(0)ಕ್ರೀಸ್‌ ನಲ್ಲಿದ್ದು, ಈ ಇಬ್ಬರು ಶನಿವಾರ ಪಾಕಿಸ್ತಾನದ ಎರಡನೇ ಇನಿಂಗ್ಸ್ ಮುಂದುವರಿಸಲಿದ್ದಾರೆ. ಪಾಕ್ ತಂಡವು ಆಸ್ಟ್ರೇಲಿಯಕ್ಕೆ ನಾಲ್ಕನೇ ಇನಿಂಗ್ಸ್‌ ನಲ್ಲಿ ಕಠಿಣ ಸವಾಲು ಒಡ್ಡುವ ಗುರಿ ಇಟ್ಟುಕೊಂಡಿದೆ.

*ಆಸ್ಟ್ರೇಲಿಯ 299 ರನ್‌ ಗೆ ಆಲೌಟ್, ಆಮಿರ್ಗೆ ಆರು ವಿಕೆಟ್

ಇದಕ್ಕೂ ಮೊದಲು ಪಾಕಿಸ್ತಾನದ ಮೊದಲ ಇನಿಂಗ್ಸ್ 313 ರನ್‌ ಗೆ ಉತ್ತರವಾಗಿ ಆಸ್ಟ್ರೇಲಿಯ ತಂಡ 2 ವಿಕೆಟ್ ನಷ್ಟಕ್ಕೆ 166 ರನ್ನಿಂದ ಮೊದಲ ಇನಿಂಗ್ಸ್ ಮುಂದುವರಿಸಿತು. ಪಾಕಿಸ್ತಾನದ ಬೌಲರ್‌ ಗಳು ಸತತ 33 ಡಾಟ್ಬಾಲ್ ಗಳನ್ನು ಎಸೆದು ಎದುರಾಳಿ ಆಟಗಾರರಿಗೆ ಒತ್ತಡ ಹೇರಲು ಯತ್ನಿಸಿದರು.

ಆಸ್ಟ್ರೇಲಿಯ ತಂಡ ಭೋಜನ ವಿರಾಮಕ್ಕೆ ಮೊದಲು ಪ್ರಮುಖ ವಿಕೆಟ್‌ ಗಳನ್ನು ಕಳೆದುಕೊಂಡಿತು. ಸ್ಟೀವ್ ಸ್ಮಿತ್ 38 ರನ್ ಹಾಗೂ ಮಾರ್‌ ನಸ್ ಲಾಬುಶೇನ್ 60 ರನ್‌ ಗೆ ವಿಕೆಟ್ ಒಪ್ಪಿಸಿದರು. ಈ ಇಬ್ಬರು ಅಘಾ ಸಲ್ಮಾನ್ ಹಾಗೂ ಮೀರ್ ಹಂಝಾ(1-53) ಬೌಲಿಂಗ್ನಲ್ಲಿ ಔಟಾಗಿದ್ದಾರೆ.

ಟ್ರಾವಿಸ್ ಹೆಡ್(10 ರನ್) ವಿಕೆಟ್ ಉರುಳಿಸುವ ಮೂಲಕ ಆಮಿರ್ ಜಮಾಲ್ ತನ್ನ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಟೀ ವಿರಾಮಕ್ಕೆ ಮೊದಲು ಸ್ಪಿನ್ನರ್ ಸಾಜಿದ್ ಖಾನ್ ಅವರು ವಿಕೆಟ್ಕೀಪರ್-ಬ್ಯಾಟರ್ ಅಲೆಕ್ಸ್ ಕಾರೆ(38 ರನ್)ವಿಕೆಟನ್ನು ಉರುಳಿಸಿದರು. ಆಗ ಆತಿಥೇಯ ತಂಡ 289 ರನ್‌ ಗೆ ಆರು ವಿಕೆಟ್‌ ಗಳನ್ನು ಕಳೆದುಕೊಂಡಿತ್ತು.

ಆಸ್ಟ್ರೇಲಿಯ ತಂಡ ಮೊದಲ ಇನಿಂಗ್ಸ್‌ ನಲ್ಲಿ ಮುನ್ನಡೆ ಪಡೆಯುವ ನಿರೀಕ್ಷೆಯಲ್ಲಿತ್ತು. ಟೀ ವಿರಾಮದ ನಂತರ ಜಮಾಲ್ ಅವರ ಅತ್ಯಮೋಘ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ 14 ರನ್ ಮುನ್ನಡೆ ಪಡೆಯುವಲ್ಲಿ ಶಕ್ತವಾಗಿದೆ.

ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಜಮಾಲ್ ಪ್ರಮುಖ ಆಟಗಾರ ಮಿಚೆಲ್ ಮಾರ್ಷ್(54 ರನ್)ಸಹಿತ ಕೇವಲ 7 ಎಸೆತಗಳಲ್ಲಿ ನಾಲ್ಕು ವಿಕೆಟ್‌ ಗಳನ್ನು ಕಬಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ (0)ಹಾಗೂ ಜೋಶ್ ಹೇಝಲ್ವುಡ್(0) ಶೂನ್ಯಕ್ಕೆ ಔಟಾದರು. ನಾಥನ್ ಲಿಯೊನ್ ಕೇವಲ 5 ರನ್ ಗಳಿಸಿದ್ದು ಆಸ್ಟ್ರೇಲಿಯ 299 ರನ್‌ ಗೆ ಸರ್ವಪತನಗೊಂಡಿತು.

ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿದ್ದ ಆಸ್ಟ್ರೇಲಿಯವು 10 ರನ್ ಸೇರಿಸುವಷ್ಟರಲ್ಲಿ ಉಳಿದ ಐದು ವಿಕೆಟ್‌ ಗಳನ್ನು ಕಳೆದುಕೊಂಡು ಹಠಾತ್ ಕುಸಿತ ಕಂಡಿತು.

ಪಾಕಿಸ್ತಾನ ತಂಡ ಆಸ್ಟ್ರೇಲಿಯ ನೆಲದಲ್ಲಿ 16 ಟೆಸ್ಟ್ ಪಂದ್ಯಗಳ ಸೋಲಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ದೃಷ್ಟಿಹರಿಸಿದೆ. ಪಾಕಿಸ್ತಾನ 1995ರಲ್ಲಿ ಕೊನೆಯ ಬಾರಿ ಆಸ್ಟ್ರೇಲಿಯದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡಿತ್ತು.

ಆದರೆ ಪಾಕಿಸ್ತಾನ ತಂಡ ತನ್ನ ಎರಡನೇ ಇನಿಂಗ್ಸ್‌ ನಲ್ಲಿ ಕಳಪೆ ಆರಂಭ ಪಡೆದಿದೆ.

ಪಾಕಿಸ್ತಾನ 26 ಓವರ್‌ ಗಳಲ್ಲಿ 68/7:

ಎರಡನೇ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ 26 ಓವರ್‌ ಗಳಲ್ಲಿ 7 ವಿಕೆಟ್‌ ಗಳ ನಷ್ಟಕ್ಕೆ 68 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿದೆ.

ಇನಿಂಗ್ಸ್‌ ನ ಮೊದಲ ಓವರ್‌ ನಲ್ಲಿ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್(0) ವೇಗಿ ಮಿಚೆಲ್ ಸ್ಟಾರ್ಕ್ರ ಸೊಗಸಾದ ಬೌಲಿಂಗ್ ಕ್ಲೀನ್ ಬೌಲ್ಡ್ ಆದರು. ಈ ಮೂಲಕ ಎರಡೂ ಇನಿಂಗ್ಸ್‌ ನಲ್ಲಿ ಶಫೀಕ್ ಸೊನ್ನೆ ಸುತ್ತಿದರು. ನಾಯಕ ಶಾನ್ ಮಸೂದ್(0) ಕೂಡ ಹೆಚ್ಚು ಹೊತ್ತು ಕ್ರೀಸ್‌ ನಲ್ಲಿ ನಿಲ್ಲಲಿಲ್ಲ. ಟೀ ವಿರಾಮದ ನಂತರ ಪಾಕಿಸ್ತಾನ 1 ರನ್‌ ಗೆ 2 ವಿಕೆಟ್ ಕಳೆದುಕೊಂಡಿತು.

ಚೊಚ್ಚಲ ಪಂದ್ಯವನ್ನಾಡುತ್ತಿರುವ ಸಯೀಮ್ ಅಯ್ಯೂಬ್ ಅವರು 33 ರನ್ ಗಳಿಸಿ ಬಾಬರ್ ಆಝಮ್ರೊಂದಿಗೆ ಇನಿಂಗ್ಸ್ ಆಧರಿಸಲು ಯತ್ನಿಸಿದರು. ಆದರೆ ಅವರು ನಾಥನ್ ಲಿಯೊನ್ ಬೀಸಿದ ಎಲ್ಬಿಡಬ್ಲ್ಯು ಬಲೆಗೆ ಬಿದ್ದರು. ಬಾಬರ್(23 ರನ್) ಅವರು ಟ್ರಾವಿಸ್ ಹೆಡ್ ಸ್ಪಿನ್ ಮೋಡಿಗೆ ವಿಕೆಟ್ ಒಪ್ಪಿಸಿದರು. ಹೇಝಲ್ವುಡ್ ಅವರು ನಾಯಕ ಮಸೂದ್ ಸಹಿತ ನಾಲ್ಕು ವಿಕೆಟ್‌ ಗಳನ್ನು ಉರುಳಿಸಿ ಪಾಕಿಸ್ತಾನದ ಮುನ್ನಡೆಯ ವಿಶ್ವಾಸಕ್ಕೆ ಧಕ್ಕೆ ತಂದರು.

ಹೇಝಲ್ವುಡ್ 24ನೇ ಓವರ್‌ ನಲ್ಲಿ ಸೌದ್ ಶಕೀಲ್(2 ರನ್), ಸಾಜಿದ್ ಖಾನ್(0) ಹಾಗೂ ಅಘಾ ಸಲ್ಮಾನ್(0)ವಿಕೆಟ್‌ ಗಳನ್ನು ಉರುಳಿಸಿ ಪಾಕ್ನ ದಿಢೀರ್ ಕುಸಿತಕ್ಕೆ ಕಾರಣರಾದರು.

ಪರ್ತ್ ಹಾಗೂ ಮೆಲ್ಬೋರ್ನ್ನಲ್ಲಿ ನಡೆದಿರುವ ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿರುವ ಆಸ್ಟ್ರೇಲಿಯ ತಂಡ ಈಗಾಗಲೇ ಸರಣಿಯನ್ನು ಗೆದ್ದುಕೊಂಡಿದೆ. ವಿದಾಯದ ಟೆಸ್ಟ್ ಪಂದ್ಯವನ್ನಾಡುತ್ತಿರುವ ಡೇವಿಡ್ ವಾರ್‌ ನರ್ಗೆ ಅವರ ತವರು ಮೈದಾನದಲ್ಲಿ ಗೆಲುವಿನ ಉಡುಗೊರೆ ನೀಡಲು ಆಸ್ಟ್ರೇಲಿಯ ಬಯಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News