ಮೂರನೇ ಟೆಸ್ಟ್: ಕೆ.ಎಸ್.ಭರತ್ ಬದಲಿಗೆ ಧ್ರುವ್ ಜುರೆಲ್ ಆಯ್ಕೆ?

Update: 2024-02-12 15:39 GMT

ಧ್ರುವ್ ಜುರೆಲ್ | Photo: PTI 

ಮುಂಬೈ: ವಿಕೆಟ್ ಕೀಪರ್-ಬ್ಯಾಟರ್ ಧ್ರುವ್ ಜುರೆಲ್ ಇಂಗ್ಲೆಂಡ್ ವಿರುದ್ಧ ರಾಜ್ಕೋಟ್ ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಸದ್ಯ ರನ್ ಗAಗಿ ಪರದಾಟ ನಡೆಸುತ್ತಿರುವ ಕೆ.ಎಸ್. ಭರತ್ ಬದಲಿಗೆ ಟೆಸ್ಟ್ ಕ್ರಿಕೆಟಿಗೆ ಕಾಲಿಡಲಿದ್ದಾರೆಯೇ? ಎಂಬ ಕುರಿತು ಚರ್ಚೆ ಆರಂಭವಾಗಿದೆ. ಪ್ರಸ್ತುತ 1-1ರಿಂದ ಸಮಬಲಗೊಂಡಿರುವ ಸರಣಿಯ ಮೂರನೇ ಪಂದ್ಯವು ಫೆಬ್ರವರಿ 15ರಿಂದ ಆರಂಭವಾಗಲಿದ್ದು ಈ ವೇಳೆ ಧ್ರುವ್ ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಈ ತನಕ ಏಳು ಟೆಸ್ಟ್ ಪಂದ್ಯಗಳನ್ನು ಆಡಿರುವ ವಿಕೆಟ್ ಕೀಪರ್ ಭರತ್ ಮಹತ್ವದ ಕೊಡುಗೆ ನೀಡಿಲ್ಲ. ಇದು ಭಾರತೀಯ ಕ್ರಿಕೆಟ್ ನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವವರ ತಾಳ್ಮೆಯನ್ನು ಕೆಡಿಸಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಭರತ್ ಬ್ಯಾಟಿಂಗ್ ಅತ್ಯಂತ ಕಳಪೆಯಾಗಿದೆ. ಅವರ ಕೀಪಿಂಗ್ ಕೂಡ ಅಷ್ಟೇನೂ ಉತ್ತಮವಾಗಿಲ್ಲ. ಅವರು ತಮಗೆ ಲಭಿಸಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿಲ್ಲ. ಮತ್ತೊಂದೆಡೆ ಜುರೆಲ್ ಪ್ರತಿಭಾವಂತ ಆಟಗಾರನಾಗಿದ್ದು ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಉತ್ತರಪ್ರದೇಶ, ಭಾರತ ಎ ತಂಡಗಳು ಹಾಗೂ ಐಪಿಎಲ್ ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಜುರೆಲ್ ರಾಜ್ಕೋಟ್ ನಲ್ಲಿ ಪಾದಾರ್ಪಣೆ ಪಂದ್ಯ ಆಡಿದರೂ ಅಚ್ಚರಿ ಇಲ್ಲ ಎಂದು ಮೂಲಗಳು ತಿಳಿಸಿವೆ.

ಭರತ್ ಟೆಸ್ಟ್ ಕ್ರಿಕೆಟಿಗೆ ಪುನರಾಗಮನವಾಗುವ ಸುವರ್ಣಾವಕಾಶವನ್ನು ಕಳೆದುಕೊಂಡಿದ್ದಾರೆ. ಈ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಆಂಧ್ರದ ಬ್ಯಾಟರ್ ಕೇವಲ 92 ರನ್ ಗಳಿಸಿದ್ದಾರೆ. ಒಟ್ಟಾರೆ 7 ಟೆಸ್ಟ್ ಪಂದ್ಯಗಳಲ್ಲಿ ಕೇವಲ 221 ರನ್ ಗಳಿಸಿದ್ದಾರೆ. ಒಂದೂ ಅರ್ಧಶತಕವನ್ನು ಗಳಿಸಿಲ್ಲ. ಇಂಗ್ಲೆಂಡ್ ವಿರುದ್ಧ ಸರಣಿಗಿಂತ ಮೊದಲು ಭರತ್ ಅವರು ಜೂನ್ 2023ರಲ್ಲಿ ಲಂಡನ್ ನ ದಿ ಓವಲ್ ನಲ್ಲಿ ಆಸ್ಟ್ರೇಲಿಯದ ವಿರುದ್ಧ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಭಾರತದ ಪರ ಕೊನೆಯ ಪಂದ್ಯ ಆಡಿದ್ದರು. ಎರಡು ಇನಿಂಗ್ಸ್ ಗಳಲ್ಲಿ 5 ಹಾಗೂ 23 ರನ್ ಗಳಿಸಿದ್ದರು.

15 ಪ್ರಥಮ ದರ್ಜೆ ಪಂದ್ಯಗಳಲ್ಲಿ ಧ್ರುವ್ ಜುರೆಲ್ 46.67ರ ಸರಾಸರಿಯಲ್ಲಿ ಒಂದು ಶತಕ ಹಾಗೂ 5 ಅರ್ಧಶತಕಗಳ ಸಹಿತ ಒಟ್ಟು 790 ರನ್ ಗಳಿಸಿದ್ದಾರೆ. 249 ರನ್ ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ. 22ರ ಹರೆಯದ ಜುರೆಲ್ ಕಳೆದ ತಿಂಗಳು ಅಹ್ಮದಾಬಾದ್ನಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 50 ರನ್ ಗಳಿಸಿದ್ದರು. ಡಿಸೆಂಬರ್ ನಲ್ಲಿ ಬೆನೋನಿಯಲ್ಲಿ ದಕ್ಷಿಣ ಆಫ್ರಿಕಾ ಎ ತಂಡದ ವಿರುದ್ಧ 69 ರನ್ ಗಳಿಸಿದ್ದರು. ಈ ಎರಡು ಚತುರ್ದಿನ ಪಂದ್ಯಗಳಾಗಿವೆ.

ರಾಂಚಿ ಟೆಸ್ಟ್ ಗೆ ಬುಮ್ರಾ ವಿಶ್ರಾಂತಿ ಸಾಧ್ಯತೆ

ಕೆಲಸದ ಒತ್ತಡ ಹಾಗೂ ತಂಡದಲ್ಲಿ ಅವರ ಉಪಸ್ಥಿತಿಯ ಮಹತ್ವವನ್ನು ಪರಿಗಣಿಸಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ಐದು ಪಂದ್ಯಗಳ ಸರಣಿಯಲ್ಲಿ ಕನಿಷ್ಠ ಒಂದು ಪಂದ್ಯದಿಂದ ವಿಶ್ರಾಂತಿ ನೀಡುವ ಸಾಧ್ಯತೆಯಿದೆ.

ಬುಮ್ರಾ ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆಯುವ ನಿರೀಕ್ಷೆ ಇದೆ. ಮಾರ್ಚ್ ಆರಂಭದಲ್ಲಿ ಧರ್ಮಶಾಲಾದಲ್ಲಿ ನಡೆಯುವ ಐದನೇ ಹಾಗೂ ಅಂತಿಮ ಟೆಸ್ಟ್ ನಲ್ಲಿ ಹೊಸ ಹುರುಪಿನೊಂದಿಗೆ ಆಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವೇಶ್ ಗೆ ಅವಕಾಶ ನಿರಾಕರಣೆಗೆ ಆಕ್ರೋಶ

ಮೊದಲೆರಡು ಟೆಸ್ಟ್ ಪಂದ್ಯಗಳಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ನೀಡದೆ ಇಂಗ್ಲೆಂಡ್ ವಿರುದ್ಧದ ಕೊನೆಯ 3 ಟೆಸ್ಟ್ ಪಂದ್ಯಗಳಿಂದ ವೇಗದ ಬೌಲರ್ ಅವೇಶ್ ಖಾನ್ರನ್ನು ಕೈಬಿಟ್ಟಿರುವ ಆಯ್ಕೆಗಾರರ ನಿರ್ಧಾರಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಅವೇಶ್ ಗೆ ಇನ್ನಷ್ಟು ಸಮಯಾವಕಾಶ ನೀಡಲು ಯೋಚಿಸಲಾಗಿದೆ. ಫೆಬ್ರವರಿಯಿಂದ ಯಾವುದೇ ಪಂದ್ಯವನ್ನು ಆಡದ ಅವೇಶ್ ಗೆ ಮಧ್ಯಪ್ರದೇಶದ ಪರ ರಣಜಿ ಟ್ರೋಫಿಯಲ್ಲಿ ಆಡಲು ತಿಳಿಸಲಾಗಿದೆ. ಭಾರತ ಎ ತಂಡದ ಪರ ಉತ್ತಮ ಪ್ರದರ್ಶನ ನೀಡಿರುವ ಕಾರಣ ಆಕಾಶ್ ದೀಪ್ರನ್ನು ಅವೇಶ್ ಬದಲಿಗೆ ಆಯ್ಕೆ ಮಾಡಲಾಗಿದೆ. ರಾಜ್ಕೋಟ್ ನಲ್ಲಿ ಭಾರತವು ಇಬ್ಬರು ವೇಗಿಗಳನ್ನು ಕಣಕ್ಕಿಳಿಸಿದರೆ ಬುಮ್ರಾ ಹಾಗೂ ಸಿರಾಜ್ ಅವಕಾಶ ಪಡೆಯಬಹುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಡೇಜ, ಪೂಜಾರಗೆ ಗೌರವ

ರಾಜ್ಕೋಟ್ ನಲ್ಲಿ ಫೆಬ್ರವರಿ 14ರಂದು ನಡೆಯುವ ಕಾರ್ಯಕ್ರಮದಲ್ಲಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯು ರವೀಂದ್ರ ಜಡೇಜ ಹಾಗೂ ಚೇತೇಶ್ವರ ಪೂಜಾರಗೆ ಭಾರತೀಯ ಕ್ರಿಕೆಟ್ ಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಗೌರವಿಸಲಿದೆ. ಸಂಸ್ಥೆಯು ಹಿರಿಯ ಆಡಳಿತಾಧಿಕಾರಿ ನಿರಂಜನ್ ಶಾ ಅವರ ಹೆಸರನ್ನು ರಾಜ್ಕೋಟ್ ಸ್ಟೇಡಿಯಂ ಗೆ ಇಡಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News