ಏಕದಿನ ವಿಶ್ವಕಪ್ ಕಣದಲ್ಲಿರುವ ಅಗ್ರಮಾನ್ಯ ಐವರು ಎಡಗೈ ವೇಗಿಗಳು

Update: 2023-10-03 17:27 GMT

ಹೊಸದಿಲ್ಲಿ : ಕ್ರಿಕೆಟ್ ಪಂದ್ಯದಲ್ಲಿ ಬ್ಯಾಟರ್ ಗಳಂತೆಯೇ ಬೌಲರ್ ಗಳು ಕೂಡ ಪಂದ್ಯವನ್ನು ಗೆಲ್ಲಿಸಿಕೊಡಬಲ್ಲರು. ವಿಶ್ವಕಪ್ ಗೆಲ್ಲುವಲ್ಲಿ ಬೌಲರ್ ಗಳ ಪಾತ್ರವೂ ಮುಖ್ಯವಾಗಿರುತ್ತದೆ. ಮುಂಬರುವ ವಿಶ್ವಕಪ್ ನಲ್ಲಿ ಎದುರಾಳಿ ಬ್ಯಾಟರ್ ಗಳ ನಿದ್ದೆಗೆಡಿಸಬಲ್ಲ ಅಗ್ರಮಾನ್ಯ ಐವರು ಬೌಲರ್ ಗಳತ್ತ ಕಿರು ನೋಟ..

ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯ): ಆಧುನಿಕ ಕ್ರಿಕೆಟ್ ಯುಗದ ಓರ್ವ ಶ್ರೇಷ್ಠ ವೇಗದ ಬೌಲರ್ ಆಗಿರುವ ಸ್ಟಾರ್ಕ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯದ ಪ್ರಮುಖ ಅಸ್ತ್ರವಾಗಿದ್ದಾರೆ. ಸ್ಟಾರ್ಕ್ 2015 ಹಾಗೂ 2019ರ ಆವೃತ್ತಿಯ ವಿಶ್ವಕಪ್ ಟೂರ್ನಿಗಳಲ್ಲಿ ಅತ್ಯಂತ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಹಿಂದಿನ 2019ರ ವಿಶ್ವಕಪ್ ನಲ್ಲಿ ಸ್ಟಾರ್ಕ್ 10 ಪಂದ್ಯಗಳಲ್ಲಿ ಒಟ್ಟು 27 ವಿಕೆಟ್ ಗಳನ್ನು ಉರುಳಿಸಿದ್ದರು. ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಆವೃತ್ತಿಯಲ್ಲಿ ಬೌಲರ್ ವೊಬ್ಬನ ಸರ್ವಶ್ರೇಷ್ಠ ಸಾಧನೆ ಇದಾಗಿತ್ತು. ಬೌಲರ್ ಗಳಿಗೆ ಕಠಿಣವಾಗಿರುವ ಭಾರತ ಪಿಚ್ ನಲ್ಲಿ ಆಸ್ಟ್ರೇಲಿಯದ ಪಾಲಿಗೆ ಸ್ಟಾರ್ಕ್ ನಿರ್ಣಾಯಕ ಬೌಲರ್ ಆಗಿದ್ದಾರೆ.

ಟ್ರೆಂಟ್ ಬೌಲ್ಟ್ (ನ್ಯೂಝಿಲ್ಯಾಂಡ್): ಹೊಸ ಚೆಂಡಿನಲ್ಲಿ ಬ್ಯಾಟರ್ ಗಳನ್ನು ಸಿಂಹಸ್ವಪ್ನವಾಗಿ ಕಾಡಬಲ್ಲ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಮುಂಬರುವ ವಿಶ್ವಕಪ್ ನಲ್ಲಿ ಎಲ್ಲರ ಗಮನ ಸೆಳೆಯಲು ಸಜ್ಜಾಗಿದ್ದಾರೆ. ತಮ್ಮ ಚುರುಕಾದ ಸ್ವಿಂಗ್ ಎಸೆತಗಳ ಮೂಲಕ ಎಲ್ಲ ಮಾದರಿ ಕ್ರಿಕೆಟ್ ನಲ್ಲಿ ಬ್ಯಾಟರ್ ಗಳನ್ನು ಕಾಡಬಲ್ಲರು. ಅವರು ಭಾರತದ ಪಿಚ್ ನಲ್ಲಿ ಹೊಸ ಚೆಂಡಿನಲ್ಲಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಐಪಿಎಲ್ ಟೂರ್ನಿಗಳಲ್ಲಿ ಆಡಿರುವ ಅನುಭವದ ಲಾಭ ಪಡೆದು ಕಿವೀಸ್ ಗೆ ಚೊಚ್ಚಲ ವಿಶ್ವಕಪ್ ಗೆದ್ದುಕೊಡುವ ಗುರಿ ಇಟ್ಟುಕೊಂಡಿದ್ದಾರೆ. 2015ರ ವಿಶ್ವಕಪ್ ನಲ್ಲಿ 9 ಪಂದ್ಯಗಳಲ್ಲಿ ಒಟ್ಟು 22 ವಿಕಟೆ್ ಗಳನ್ನು ಪಡೆದಿದ್ದ ಬೌಲ್ಟ್ ಕಿವೀಸ್ ಪರ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಇದು ಒಂದೇ ಆವೃತ್ತಿಯ ವಿಶ್ವಕಪ್ ನಲ್ಲಿ ಕಿವೀಸ್ ಬೌಲರ್ ವೊಬ್ಬನ ಶ್ರೇಷ್ಠ ಸಾಧನೆಯಾಗಿದೆ ಉಳಿದುಕೊಂಡಿದೆ.

ಶಾಹೀನ್ ಶಾ ಅಫ್ರಿದಿ (ಪಾಕಿಸ್ತಾನ): ಪಾಕಿಸ್ತಾನದ ಪರ ಎರಡನೇ ಬಾರಿ ಏಕದಿನ ವಿಶ್ವಕಪ್ ನಲ್ಲಿ ಆಡಲಿರುವ ಶಾಹೀನ್ ಶಾ ಅಫ್ರಿದಿ ಇದೇ ಮೊದಲ ಬಾರಿ ಭಾರತಕ್ಕೆ ಆಗಮಿಸಿದ್ದಾರೆ. ಅಫ್ರಿದಿ ಪಾಕಿಸ್ತಾನದ ಪ್ರಮುಖ ಬೌಲರ್ ಆಗಿದ್ದು, ಮುಂಬರುವ ವಿಶ್ವಕಪ್ ನಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಭೂಮಿಕೆ ನಿಭಾಯಿಸುವ ನಿರೀಕ್ಷೆಯಿದೆ.

ರೀಸ್ ಟೋಪ್ಲಿ (ಇಂಗ್ಲೆಂಡ್): ಇಂಗ್ಲೆಂಡ್ ನ ಟೋಪ್ಲಿ ಸೀಮಿತ ಓವರ್ ಕ್ರಿಕೆಟ್ ನಲ್ಲಿಆಂಗ್ಲರ ತಂಡದಲ್ಲಿರುವ ಅತ್ಯಂತ ನಿಖರ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಟೋಪ್ಲೆಗೆ ಭಾರತದ ವಾತಾವರಣದಲ್ಲಿ ಆಡಿರುವ ಅನುಭವವಿದೆ. ಕಠಿಣ ಪಿಚ್ ಗಳಲ್ಲಿ ಇದು ಇಂಗ್ಲೆಂಡ್ ಗೆ ನೆರವಾಗಬಹುದು.

ಮಾರ್ಕೊ ಜಾನ್ಸನ್ (ದ.ಆಫ್ರಿಕಾ): ನೀಳಕಾಯದ ವೇಗದ ಬೌಲರ್ ಜಾನ್ಸನ್ ಮುಂಬರುವ ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ತಂಡದಲ್ಲಿರುವ ಪ್ರಮುಖ ಬೌಲರ್ ಗಳಲ್ಲಿ ಒಬ್ಬರಾಗಿದ್ದಾರೆ. ಬಿಗಿಯಾದ ಲೆಂಗ್ತ್ ನಲ್ಲಿ ಬೌಲಿಂಗ್ ಮಾಡಬಲ್ಲ ಜಾನ್ಸನ್ ಯಾವುದೇ ವಾತಾವರಣಗಳಿಗೆ ಹೊಂದಿಕೊಳ್ಳುವ ಬೌಲರ್ ಪೈಕಿ ಒಬ್ಬರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News