ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್ ಆಗಿ ಉಮರ್ ಗುಲ್, ಸಯೀದ್ ಅಜ್ಮಲ್ ನೇಮಕ
ಕರಾಚಿ: ಉಮರ್ ಗುಲ್ ಹಾಗೂ ಸಯೀದ್ ಅಜ್ಮಲ್ ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದಲ್ಲಿ ಕ್ರಮವಾಗಿ ವೇಗದ ಹಾಗೂ ಸ್ಪಿನ್ ಬೌಲಿಂಗ್ ಕೋಚ್ ಗಳಾಗಿ ನೇಮಕಗೊಂಡಿದ್ದಾರೆ.
ಡಿ.14ರಿಂದ ಜ. 7ರ ತನಕ ನಡೆಯುವ ಆಸ್ಟ್ರೇಲಿಯ ವಿರುದ್ಧ ಸರಣಿಯು ಈ ಇಬ್ಬರಿಗೆ ಮೊದಲ ಸವಾಲಾಗಿದ್ದು, ಆ ನಂತರ ನ್ಯೂಝಿಲ್ಯಾಂಡ್ ವಿರುದ್ಧ ಜನವರಿ 12ರಿಂದ 21ರ ತನಕ ನಡೆಯುವ ಟಿ-20 ಸರಣಿಗೆ ಕೋಚಿಂಗ್ ನೀಡಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಹೇಳಿಕೆಯೊಂದರಲ್ಲಿ ತಿಳಿಸಿದೆ.
ಗುಲ್ ಈ ಹಿಂದೆ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟ್ವೆಂಟಿ-20 ಸರಣಿ ಹಾಗೂ ಸ್ವದೇಶದಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಸರಣಿಯಲ್ಲಿ ಪಾಕಿಸ್ತಾನದ ಪುರುಷರ ತಂಡದ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು.
ಪಾಕಿಸ್ತಾನ ತಂಡದ ಬೌಲಿಂಗ್ ಕೋಚ್ ತಂಡಕ್ಕೆ ಸೇರಲು ನನಗೆ ಸಂತೋಷವಾಗುತ್ತಿದೆ. ಪಿಸಿಬಿ ಆಡಳಿತ ಸಮಿತಿಯು ಪಾಕಿಸ್ತಾನ ಕ್ರಿಕೆಟ್ಗೆ ಕಾಣಿಕೆ ನೀಡಲು ನನಗೆ ನೀಡಿರುವ ಅವಕಾಶವೊಂದು ಗೌರವವಾಗಿದೆ. ಪುರುಷರ ತಂಡದಲ್ಲಿ ಈ ಹಿಂದೆ ಮಾಡಿರುವ ಕೆಲಸದ ಅನುಭವದ ಬಲದಿಂದ ಪಾಕಿಸ್ತಾನ ಬೌಲಿಂಗ್ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವೆ ಎಂದು ಗುಲ್ ಹೇಳಿದ್ದಾರೆ.
ವಿಶ್ವದ ಮಾಜಿ ನಂ.1 ಬೌಲರ್ ಸಯೀದ್ ಅಜ್ಮಲ್ ಸ್ಪಿನ್ ಕೋಚ್ ಆಗಿ ಕೈಜೋಡಿಸಲಿದ್ದಾರೆ. ಪಾಕ್ ತಂಡ ಇತ್ತೀಚೆಗೆ ಕೊನೆಗೊಂಡಿರುವ ವಿಶ್ವಕಪ್ನಲ್ಲಿ ನಾಕೌಟ್ ಹಂತಕ್ಕೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಗಿತ್ತು.
ಇತ್ತೀಚೆಗೆ ಮಾಜಿ ಟೆಸ್ಟ್ ನಾಯಕ ಮುಹಮ್ಮದ್ ಹಫೀಝ್ರನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಟೀಮ್ ಡೈರೆಕ್ಟರ್ ಆಗಿ ನೇಮಿಸಲಾಗಿತ್ತು.