ರೋಚಕ ಪಂದ್ಯದಲ್ಲಿ ಪಾಕ್ ವಿರುದ್ಧ 'ಸೂಪರ್ ಜಯ' ಸಾಧಿಸಿದ ಅಮೆರಿಕ

Update: 2024-06-07 04:19 GMT

PC:X/ DcWalaDesi

ಹೊಸದಿಲ್ಲಿ: ಅಮೆರಿಕದ ಕ್ರಿಕೆಟ್ ಅಭಿಮಾನಿಗಳಿಗೆ ಗುರುವಾರ ದೇಶದ ಇತಿಹಾಸದಲ್ಲೇ ಅತ್ಯಂತ ಸಂಭ್ರಮದ ದಿನ. ದಲ್ಲಾಸ್ ನಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ ತಂಡವನ್ನು ಸೂಪರ್ ಓವರ್ ನಲ್ಲಿ ಸೋಲಿಸಿದ ಅಮೆರಿಕ ಕ್ರಿಕೆಟ್ ತಂಡ ಹೊಸ ಇತಿಹಾಸ ನಿರ್ಮಿಸಿದೆ.

ಟೆಕ್ಸಸ್ ನ ದಲ್ಲಾಸ್ ಬಳಿಯ ಗ್ರ್ಯಾಂಡ್ ಪ್ರೈರಿಯಲ್ಲಿ ನಡೆದ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ 20 ಓವರ್ ಗಳಲ್ಲಿ 159 ರನ್ ಗಳಿಸಿದವು. ಅಮೆರಿಕ ತಂಡ ಸೂಪರ್ ಓವರ್ ನಲ್ಲಿ ಗೆಲುವಿಗಾಗಿ ಪಾಕಿಸ್ತಾನಕ್ಕೆ 19 ರನ್ ಗಳ ಗುರಿ ನೀಡಿತು.

ಈ ಹಂತದಲ್ಲಿ ಭಾರತ ಸಂಜಾತ ವೇಗಿ ನೇತ್ರವಾಳ್ಕರ್, 2022ರ ವಿಶ್ವಕಪ್ ನ ರನ್ನರ್ ಅಪ್ ಹಾಗೂ 2009ರ ವಿಶ್ವಚಾಂಪಿಯನ್ ತಂಡದ ರನ್ ಗಳಿಕೆಗೆ ಕಡಿವಾಣ ಹಾಕಿದರು. ಪಾಕಿಸ್ತಾನ ಸೂಪರ್ ಓವರ್ ನಲ್ಲಿ 1 ವಿಕೆಟ್ ನಷ್ಟಕ್ಕೆ 13 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.

ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿ 7 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ನೇತ್ರವಾಳ್ಕರ್ 18 ರನ್ ನೀಡಿ 2 ವಿಕೆಟ್ ಕಬಳಿಸಿದರು. ಈಮಧ್ಯೆ ಅಮೆರಿಕದ ಇನಿಂಗ್ಸ್ ಕೂಡಾ ನಾಟಕೀಯವಾಗಿ ಅಂತ್ಯಗೊಂಡಿತು. ಹ್ಯಾರಿಸ್ ರವೂಫ್ ಅವರ ಕೊನೆಯ ಎಸೆತದಲ್ಲಿ ನಿತೀಶ್ ಕುಮಾರ್ ಬೌಂಡರಿ ಬಾರಿಸುವ ಮೂಲಕ ತಂಡದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 159 ಆಗಲು ನೆರವಾದರು.

ಸೂಪರ್ ಓವರ್ ನಲ್ಲಿ ಪಾಕಿಸ್ತಾನದ ಮೊಹ್ಮದ್ ಅಮೀರ್ ಹಲವು ವೈಡ್ ಗಳನ್ನು ಎಸೆದರು. ಫೀಲ್ಡಿಂಗ್ ನಲ್ಲೂ ಗೊಂದಲಗಳಾಗಿ ಓವರ್ ಥ್ರೋಗಳ ಮೂಲಕವೂ ರನ್ ಬಂತು. ಈ ಓವರ್ ನಲ್ಲಿ ಅಮೆರಿಕ ತಂಡ 18 ರನ್ ಗಳನ್ನು ಬಾಚಿತು. ಬೌಲಿಂಗ್ನಲ್ಲಿ ನೇತ್ರವಾಳ್ಕರ್ ಪಾಕಿಸ್ತಾನದ ಇಫ್ತಿಖರ್ ಅಹ್ಮದ್ ಅವರನ್ನು ಪೆವಿಲಿಯನ್ ಗೆ ಕಳುಹಿಸಿದರು. ಕೊನೆಯ ಎಸೆತದಲ್ಲಿ 7 ರನ್ ಗಳ ಅಗತ್ಯವಿದ್ದಾಗ ಶಬಾದ್ ಖಾನ್ ಸಿಕ್ಸರ್ ಸಿಡಿಸಲು ವಿಫಲರಾದರು. ಈ ಹಂತದಲ್ಲಿ ತವರಿನ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News