“ನಮಗೆ ಐಷಾರಾಮಿ ವ್ಯವಸ್ಥೆ ಬೇಕಿಲ್ಲ”: ಭಾರತ ತಂಡಕ್ಕೆ ‘ಮೂಲಭೂತ ವ್ಯವಸ್ಥೆ’ ಒದಗಿಸದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಹಾರ್ದಿಕ್ ಪಾಂಡ್ಯ ಅಸಮಾಧಾನ
ತರೌಬಾ (ವೆಸ್ಟ್ ಇಂಡೀಸ್): ಏಕದಿನ ಸರಣಿ ಗೆದ್ದ ಬಳಿಕ ಭಾರತ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಹಾರ್ದಿಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮಗೆ ಐಷಾರಾಮಿ ವ್ಯವಸ್ಥೆ ಬೇಕಿಲ್ಲ, ಆದರೆ ಕೆಲವು ಮೂಲಭೂತ ಅಗತ್ಯಗಳ ಕುರಿತು ಕಾಳಜಿ ತೆಗೆದುಕೊಳ್ಳಬೇಕು ಎಂದು ಪಾಂಡ್ಯ ಹೇಳಿದ್ದಾರೆ.
ಭಾರತ ತಂಡವು ವೆಸ್ಟ್ ಇಂಡೀಸ್ ತಂಡವನ್ನು ಮೂರನೆಯ ಏಕದಿನ ಪಂದ್ಯದಲ್ಲಿ 200 ರನ್‌ಗಳ ಅಂತರದಲ್ಲಿ ಮಣಿಸುವ ಮೂಲಕ 2-1ರ ಅಂತರದಲ್ಲಿ ಪ್ರಶಸ್ತಿಯನ್ನು ಗೆದ್ದ ನಂತರ ಪ್ರವಾಸ ಯೋಜನೆ ಹಾಗೂ ಇನ್ನಿತರ ವ್ಯವಸ್ಥೆಗಳ ಆಯೋಜನೆಯ ಬಗ್ಗೆ ಹಾರ್ದಿಕ್ ಪಾಂಡ್ಯ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಯುವ ಆಟಗಾರರಾದ ಸಂಜು ಸ್ಯಾಮ್ಸನ್ ಹಾಗೂ ಋತುರಾಜ್ ಗಾಯಕ್ವಾಡ್ ಅವರಿಗೆ ಹೆಚ್ಚು ಅವಕಾಶ ಒದಗಿಸಲು ನಾಯಕ ರೋಹಿತ್ ಶರ್ಮ ಹಾಗೂ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಿದ್ದರಿಂದ ಹಾರ್ದಿಕ್ ಪಾಂಡ್ಯ ಸತತ ಎರಡನೆ ಬಾರಿ ತಂಡವನ್ನು ಮುನ್ನಡೆಸಿದರು. ಪಂದ್ಯ ಮುಗಿದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚೊಚ್ಚಲ ಪಂದ್ಯದ ಆತಿಥ್ಯ ವಹಿಸಿದ್ದ ತರೌಬಾದಲ್ಲಿನ ಬ್ರಿಯಾನ್ ಕ್ರಿಕೆಟ್ ಕ್ರೀಡಾಂಗಣದಲ್ಲಿನ ಸೌಲಭ್ಯಗಳ ಕುರಿತು ಮಾಜಿ ವೆಸ್ಟ್ ಇಂಡೀಸ್ ಆರಂಭಿಕ ಆಟಗಾರ ಹಾಗೂ ಸದ್ಯ ಪ್ರಖ್ಯಾತ ವೀಕ್ಷಕ ವಿವರಣೆಕಾರರಾಗಿರುವ ಡರೇನ್ ಗಂಗಾ ಅವರು ಹಾರ್ದಿಕ್ ಪಾಂಡ್ಯರನ್ನು ಪ್ರಶ್ನಿಸಿದರು.
ಕ್ರೀಡಾಂಗಣವನ್ನು ಅತ್ಯುತ್ತಮ ಕ್ರೀಡಾಂಗಣಗಳ ಪೈಕಿ ಒಂದು ಶ್ಲಾಘಿಸಿದ ಅವರು, ಆ ಕೂಡಲೇ ಭಾರತದ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಒದಗಿಸಿದ ಸೌಲಭ್ಯಗಳಲ್ಲಿನ ಕೊರತೆಯನ್ನು ಎತ್ತಿ ತೋರಿಸಿದರು. ಮೂಲಭೂತ ಅಗತ್ಯಗಳ ಕೊರತೆಯ ಕುರಿತು ದೂರುತ್ತಾ ಹೋದ ಹಾರ್ದಿಕ್ ಪಾಂಡ್ಯ, ಭವಿಷ್ಯದಲ್ಲಿ ಈ ಕುರಿತು ಆತಿಥೇಯರು ಕಾಳಜಿ ವಹಿಸಬೇಕು ಎಂದು ಬಯಸುತ್ತೇನೆ ಎಂದರು.
"ನಾವು ಈವರೆಗೆ ಆಡಿರುವ ಅತ್ಯುತ್ತಮ ಕ್ರೀಡಾಂಗಣಗಳ ಪೈಕಿ ಇದೂ ಒಂದಾಗಿದ್ದು, ನಾವು ಮುಂದಿನ ಬಾರಿ ವೆಸ್ಟ್ ಇಂಡೀಸ್‌ಗೆ ಬಂದಾಗ ಇದು ಮತ್ತಷ್ಟು ಸುಧಾರಿಸಬೇಕು. ಪ್ರಯಾಣದಿಂದ ಹಲವಾರು ಸಂಗತಿಗಳವರೆಗೆ ನಿರ್ವಹಿಸಬೇಕು. ಕಳೆದ ವರ್ಷ ಕೂಡಾ ಕೆಲವು ಸಮಸ್ಯೆಗಳಾದವು. ವೆಸ್ಟ್ ಇಂಡೀಸ್ ಈ ಸಂಗತಿಯನ್ನು ಗಮನಕ್ಕೆ ತೆಗೆದುಕೊಳ್ಳಬೇಕು ಮತ್ತು ಯಾವುದಾದರೂ ತಂಡ ಪ್ರಯಾಣಿಸುವಾಗ ಇದನ್ನು ಖಚಿತಪಡಿಸಬೇಕು. ನಮಗೆ ಐಷಾರಾಮಿ ವ್ಯವಸ್ಥೆ ಬೇಕಿಲ್ಲ. ಅದರೆ, ಕೆಲವು ಮೂಲಭೂತ ಅಗತ್ಯಗಳ ಕುರಿತು ಕಾಳಜಿ ತೆಗೆದುಕೊಳ್ಳಬೇಕು ಎಂದು ನಾವು ಬಯಸುತ್ತೇವೆ. ಇದನ್ನು ಹೊರತುಪಡಿಸಿ, ಇಲ್ಲಿಗೆ ಆಗಮಿಸಿ, ಒಂದಿಷ್ಟು ಉತ್ತಮ ಕ್ರಿಕೆಟ್ ಆಡಿದ್ದನ್ನು ಸಂಭ್ರಮಿಸಿದೆವು" ಎಂದು ಮಂಗಳವಾರ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.