ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಪದಕ ಗಳಿಕೆಯಲ್ಲಿ ಶತಕ ಬಾರಿಸಲಿದೆಯೇ?

Update: 2023-09-23 17:37 GMT

                                                                                   PHOTO: PTI

ಹೊಸದಿಲ್ಲಿ: ಒಲಿಂಪಿಕ್ಸ್ ಚಾಂಪಿಯನ್ ಜಾವೆಲಿನ್ ಥೋ ಅತ್ಲೀಟ್ ನೀರಜ್ ಚೋಪ್ರಾ ನಾಯಕತ್ವದ ಭಾರತವು ಈ ಬಾರಿ ಅತ್ಯಂತ ಹೆಚ್ಚು ಒಟ್ಟು 655 ಅತ್ಲೀಟ್‌ಗಳನ್ನು (ಪುರುಷರು 328, ಮಹಿಳೆಯರು 327) ಏಶ್ಯನ್ ಗೇಮ್ಸ್‌ಗೆ ಕಳುಹಿಸಿಕೊಟ್ಟಿದೆ. 2018ರ ಆವೃತ್ತಿಯ ಏಶ್ಯನ್ ಗೇಮ್ಸ್‌ನಲ್ಲಿ 572 ಅತ್ಲೀಟ್‌ಗಳನ್ನು ಕಳುಹಿಸಿಕೊಟ್ಟಿದ್ದ ಭಾರತ 36 ಕ್ರೀಡೆಗಳಲ್ಲಿ ಸ್ಪರ್ಧಿಸಿ ಒಟ್ಟು 70 ಪದಕಗಳನ್ನು ಗೆದ್ದು ಉತ್ತಮ ನಿರ್ವಹಣೆ ತೋರಿತ್ತು. ಭಾರತೀಯರು 19ನೇ ಆವೃತ್ತಿಯ ಗೇಮ್ಸ್‌ನಲ್ಲಿ ಪದಕ ಗಳಿಕೆಯಲ್ಲಿ ಶತಕವನ್ನು ಬಾರಿಸುವ ವಿಶ್ವಾಸದಲ್ಲಿದ್ದಾರೆ. ಪದಕದ ಸುತ್ತು ರವಿವಾರ ಆರಂಭವಾಗಲಿದೆ. ತಾವು ಆಯ್ಕೆ ಮಾಡಿರುವ ಅತ್ಲೀಟ್‌ಗಳು ಈ ಬಾರಿ ಹೆಚ್ಚು ಪದಕ ಗೆದ್ದುಕೊಂಡು ಬರಲಿದ್ದಾರೆ ಎಂದು ಭಾರತದ ಕ್ರೀಡಾಧಿಕಾರಿಗಳು ವಿಶ್ವಾಸದಲ್ಲಿದ್ದಾರೆ.

ಭಾರತವು ಅತ್ಲೆಟಿಕ್ಸ್, ಶೂಟಿಂಗ್, ಬ್ಯಾಡ್ಮಿಂಟನ್, ಬಾಕ್ಸಿಂಗ್, ಕುಸ್ತಿ, ಟೆನಿಸ್, ರೋವಿಂಗ್, ಸೈಲಿಂಗ್ ಹಾಗೂ ಕ್ರಿಕೆಟ್ ಅಲ್ಲದೆ, ಸ್ಕ್ವಾಷ್, ಜುಡೊ, ವುಶು ಹಾಗೂ ಕುದುರೆ ಸವಾರಿಯಲ್ಲಿ ಹೆಚ್ಚಿನ ಪದಕ ಗೆಲ್ಲುವ ಭರವಸೆಯಲ್ಲಿದೆ. ಗೇಮ್ಸ್‌ನಲ್ಲಿ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ಪರಿಚಯಿಸಲಾಗುತ್ತಿದ್ದು, ಇದರಲ್ಲಿ ಭಾರತವು ಚಿನ್ನ ಜಯಿಸುವ ವಿಶ್ವಾಸದಲ್ಲಿದೆ.

ಗೇಮ್ಸ್‌ನಲ್ಲಿ ಭಾರತೀಯ ರೋವರ್‌ಗಳು ಒಟ್ಟು 8 ರಲ್ಲಿ ಫೈನಲ್‌ಗೆ ತಲುಪಿದ್ದಾರೆ. ಪುರುಷರ ವಾಲಿಬಾಲ್ ತಂಡ ಶುಕ್ರವಾರ ಕ್ವಾರ್ಟರ್ ಫೈನಲ್ ತಲುಪಿದೆ. ಚೆಸ್ 10 ವರ್ಷಗಳ ನಂತರ ಗೇಮ್ಸ್‌ಗೆ ವಾಪಸಾಗುತ್ತಿದೆ. ಹೀಗಾಗಿ ಭಾರತವು ಇನ್ನಷ್ಟು ಪದಕ ಗೆಲ್ಲುವ ವಿಶ್ವಾಸದಲ್ಲಿದೆ.

1951ರಲ್ಲಿ ಗೇಮ್ಸ್ ಆರಂಭವಾದ ನಂತರ ಭಾರತವು 672 ಪದಕಗಳನ್ನು ಜಯಿಸಿದೆ. ಏಶ್ಯನ್ ಗೇಮ್ಸ್‌ನಲ್ಲಿ ಭಾರತವು ಈ ತನಕ 155 ಚಿನ್ನದ ಪದಕಗಳನ್ನು ಜಯಿಸಿದೆ.

1951ರಲ್ಲಿ ಭಾರತವು 15 ಚಿನ್ನ ಸಹಿತ ಒಟ್ಟು 51 ಪದಕ ಜಯಿಸಿತ್ತು. ಜಪಾನ್ ನಂತರ 2ನೇ ಸ್ಥಾನದಲ್ಲಿತ್ತು. ಏಶ್ಯನ್ ಗೇಮ್ಸ್ ಇತಿಹಾಸದಲ್ಲಿ 2ನೇ ಸ್ಥಾನ ಪಡೆದಿರುವುದು ಭಾರತದ ಶ್ರೇಷ್ಠ ಸಾಧನೆಯಾಗಿ ಉಳಿದಿದೆ.

ಈ ಬಾರಿಯ ಏಶ್ಯನ್ ಗೇಮ್ಸ್‌ನಲ್ಲಿ ಪದಕ ಗೆಲ್ಲಬಲ್ಲ ಪ್ರಮುಖ ಅತ್ಲೀಟ್, ತಂಡಗಳತ್ತ ಒಂದು ನೋಟ...

ನೀರಜ್ ಚೋಪ್ರಾ(ಪುರುಷರ ಜಾವೆಲಿನ್ ಥ್ರೋ): ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಆಗಿರುವ 25ರ ಹರೆಯದ ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆಲ್ಲಬಲ್ಲ ನೆಚ್ಚಿನ ಅತ್ಲೀಟ್ ಆಗಿದ್ದಾರೆ. 2018ರ ಆವೃತ್ತಿಯಲ್ಲಿ ನೀರಜ್ ಚಿನ್ನ ಜಯಿಸಿದ್ದರು. ಈ ಬಾರಿ ಚಿನ್ನವನ್ನು ತನ್ನಲ್ಲೇ ಉಳಿಸಿಕೊಳ್ಳುವತ್ತ ಚಿತ್ತಹರಿಸಿದ್ದಾರೆ. ಪಾಕಿಸ್ತಾನದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತ ಅರ್ಷದ್ ನದೀಮ್ ಅವರು ನೀರಜ್‌ರ ಪ್ರಮುಖ ಎದುರಾಳಿಯಾಗಿದ್ದಾರೆ.

ಮುರಳಿ ಶ್ರೀಶಂಕರ್(ಪುರುಷರ ಲಾಂಗ್‌ಜಂಪ್): ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ ಲಾಂಗ್‌ಜಂಪ್ ಪಟು ಶ್ರೀಶಂಕರ್ ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಇಟ್ಟುಕೊಂಡಿದ್ದಾರೆ. 8.41 ಮೀ. ಮುರಳಿ ಅವರ ಜೀವನಶ್ರೇಷ್ಠ ಸಾಧನೆಯಾಗಿದೆ.

ಜೆಸ್ವಿನ್ ಅಲ್‌ಡ್ರಿನ್(ಪುರುಷರ ಲಾಂಗ್‌ಜಂಪ್): ಈ ವರ್ಷಾರಂಭದಲ್ಲಿ 8.42 ಮೀ.ದೂರ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದ ಅಲ್‌ಡ್ರಿನ್ ಆ ನಂತರ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು.

ಪ್ರವೀಣ್ ಚಿತ್ರವೇಲ್(ಪುರುಷರ ಟ್ರಿಪಲ್ ಜಂಪ್): ವಿಶ್ವದ ನಂ.6ನೇ ಟ್ರಿಪಲ್ ಜಂಪ್ ಪಟು ಪ್ರವೀಣ್ 17.37 ಮೀ.ದೂರಕ್ಕೆ ಜಿಗಿದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಈ ಬಾರಿ ಏಶ್ಯನ್ ಗೇಮ್ಸ್‌ನಲ್ಲಿ 22ರ ಹರೆಯದ ಪ್ರವೀಣ್ ಪದಕದ ಸ್ಪರ್ಧಿಯಾಗಿದ್ದಾರೆ.

ಪುರುಷರ 4-400 ಮೀ.ರಿಲೇ: ವಿಶ್ವ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ 2 ನಿಮಿಷ, 59.05 ಸೆಕೆಂಡ್‌ನಲ್ಲಿ ಗುರಿ ತಲುಪಿರುವ ಪುರುಷರ 4-400 ಮೀ.ರಿಲೇ ತಂಡ ಏಶ್ಯನ್ ದಾಖಲೆ ನಿರ್ಮಿಸಿದೆ. ಈ ಬಾರಿಯ ಗೇಮ್ಸ್‌ನಲ್ಲಿ ಪುರುಷರ 4-400 ಮೀ.ರಿಲೇ ತಂಡ ಚಿನ್ನದ ಪದಕ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿದೆ.ಈ ಋತುವಿನಲ್ಲಿ ಭಾರತದ ಓಟಗಾರರ ಸಮಯವು ವಿಶ್ವದಲ್ಲಿ 8ನೇ ಶ್ರೇಷ್ಠವಾಗಿದೆ.

ಶೈಲಿ ಸಿಂಗ್(ಮಹಿಳೆಯರ ಲಾಂಗ್‌ಜಂಪ್): 19ರ ಹರೆಯದ ಲಾಂಗ್‌ಜಂಪರ್ ಶೈಲಿ ಸಿಂಗ್ ಜುಲೈನಲ್ಲಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಜಯಿಸಿದ್ದು ಇನ್ನೊಂದು ದಿಟ್ಟ ಹೆಜ್ಜೆ ಇಡುವ ವಿಶ್ವಾಸದಲ್ಲಿದ್ದಾರೆ.

ಪಾರುಲ್ ಚೌಧರಿ(ಮಹಿಳೆಯರ 3000 ಮೀ. ಸ್ಟೀಪಲ್ ಚೇಸ್): ವರ್ಷದ ಶ್ರೇಷ್ಠ ಹಾಗೂ ರಾಷ್ಟ್ರೀಯ ದಾಖಲೆಯ ಸಮಯ(9:15.31)ದಲ್ಲಿ ಗುರಿ ತಲುಪಿರುವ ಪಾರುಲ್ ಚೌಧರಿ ಏಶ್ಯಾದಲ್ಲಿ ನಂ.2ನೇ ಓಟಗಾರ್ತಿಯಾಗಿದ್ದಾರೆ.

ಸ್ವಪ್ನಾ ಬರ್ಮನ್(ಮಹಿಳೆಯರ ಹೆಪ್ತಾಥ್ಲಾನ್): ಚಿನ್ನದ ಪದಕದ ಪ್ರಬಲ ಸ್ಪರ್ಧಿಯಾಗಿರುವ ಸ್ವಪ್ನಾ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚೆಗೆ ನಡೆದ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಏಶ್ಯ ಖಂಡದ ನಾಯಕಿ,ಉಜ್ಬೇಕಿಸ್ತಾನದ ಎಕಟೆರಿನಾ ವೊರೊನಿನಾರನ್ನು ಮಣಿಸಿದ್ದರು.

ಮಹಿಳೆಯರ 4-400 ಮೀ.ರಿಲೇ: ಈ ಋತುವಿನಲ್ಲಿ ಏಶ್ಯದಲ್ಲಿ ಮಹಿಳೆಯರ 4-400 ಮೀ.ರಿಲೇಯಲ್ಲಿ ನಂ.1 ಆಗಿರುವ ಭಾರತೀಯ ತಂಡವು ಶ್ರೀಲಂಕಾದಲ್ಲಿ ಜುಲೈನಲ್ಲಿ ನಡೆದಿದ್ದ ಕ್ರೀಡಾಕೂಟದಲ್ಲಿ 3:30.41 ಸೆಕೆಂಡ್‌ನಲ್ಲಿ ಗುರಿ ತಲುಪಿತ್ತು.

ನಿಖಾತ್ ಝರೀನಾ(51 ಕೆಜಿ ಮಹಿಳೆಯರ ಬಾಕ್ಸಿಂಗ್): ಬಾಕ್ಸಿಂಗ್ ಸ್ಪರ್ಧೆಯಲ್ಲಿ ನಿಖಾತ್ ಚಿನ್ನದ ಪದಕ ಗೆಲ್ಲುವ ನೆಚ್ಚಿನ ಬಾಕ್ಸರ್ ಆಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಫ್ಲೈಯ್‌ವೇಟ್(51ಕೆಜಿ)ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಜಯಿಸಿರುವ ನಿಖಾತ್ ಎರಡು ಸ್ಟ್ರಾಂಡ್ಜಾ ಸ್ಮಾರಕ ಪ್ರಶಸ್ತಿಗಳು ಹಾಗೂ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಏಶ್ಯನ್ ಗೇಮ್ಸ್‌ನಲ್ಲಿ ಮತ್ತೊಂದು ಚಿನ್ನದ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಲವ್ಲೀನಾ ಬೊರ್ಗೊಹೈನ್(75 ಕೆಜಿ ಮಹಿಳೆಯರ ಬಾಕ್ಸಿಂಗ್): ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಲವ್ಲೀನಾ ಬೊರ್ಗೊಹೈನ್ 75 ಕೆಜಿ ವಿಭಾಗದಲ್ಲಿ ಏಶ್ಯನ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದು ಅವರ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ.

ದೀಪಕ್ ಭೋರಿಯಾ(51 ಕೆಜಿ ಪುರುಷರ ಬಾಕ್ಸಿಂಗ್): ಹರ್ಯಾಣದ ಬಾಕ್ಸರ್ ದೀಪಕ್ ಭೋರಿಯಾ ನಿರ್ಭೀತಿಯ ಬಾಕ್ಸಿಂಗ್ ಆಡುತ್ತಿದ್ದು ಕೆಲವು ದೈತ್ಯ ಬಾಕ್ಸರ್‌ಗಳಿಗೆ ಸೋಲುಣಿಸಿದ್ದಾರೆ. ಇತ್ತೀಚೆಗಿನ ವರ್ಷಗಳಲ್ಲಿ ಭಾರತದ ಪರ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.

ಬಜರಂಗ್ ಪುನಿಯಾ(65 ಕೆಜಿ ಪುರುಷರ ಕುಸ್ತಿ): ಬಜರಂಗ್ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲಬಲ್ಲ ನೆಚ್ಚಿನ ಕುಸ್ತಿಪಟು ಆಗಿದ್ದಾರೆ.ಇಂಡೋನೇಶ್ಯದ ಜಕಾರ್ತದಲ್ಲಿ 2018ರಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ಮೊದಲ ಸ್ಥಾನ ಪಡೆದಿದ್ದರು. 2021ರಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚು ಜಯಿಸಿದ್ದರು. ಕಳೆದ ವರ್ಷ ಬರ್ಮಿಂಗ್‌ಹ್ಯಾಮ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿ ಭಾರತದ ಓರ್ವ ಶ್ರೇಷ್ಠ ಕುಸ್ತಿಪಟುವಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡದ ಬಜರಂಗ್ ಈ ಬಾರಿ ತನ್ನ ಸಾಮರ್ಥ್ಯದಷ್ಟು ಆಡುತ್ತಾರೆಯೇ ಎಂಬ ಕೌತುಕವಿದೆ.

ಅಂತಿಮ್ ಪಾಂಘಾಲ್(53 ಕೆಜಿ ಮಹಿಳೆಯರ ಕುಸ್ತಿ): ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ ನಂತರ ಇತ್ತೀಚೆಗಿನ ಪ್ರದರ್ಶನವನ್ನು ಪರಿಗಣಿಸಿದರೆ ಏಶ್ಯಾಡ್‌ನಲ್ಲಿ ಅವರು ಚಿನ್ನದ ಪದಕ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ.

ಸಾತ್ವಿಕ್‌ಸಾಯಿರಾಜ್-ಚಿರಾಗ್ ಶೆಟ್ಟಿ(ಬ್ಯಾಡ್ಮಿಂಟನ್, ಪುರುಷರ ಡಬಲ್ಸ್): 2023ರ ಆರಂಭದಲ್ಲಿ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕವನ್ನು ಜಯಿಸಿದ್ದ ಸಾತ್ವಿಕ್ ಹಾಗೂ ಚಿರಾಗ್ ಈ ಐತಿಹಾಸಿಕ ಸಾಧನೆ ಮಾಡಿದ ಭಾರತದ ಮೊದಲ ಜೋಡಿಯಾಗಿದ್ದಾರೆ. ಇದೀಗ ಏಶ್ಯಾಡ್‌ನಲ್ಲಿ ಶ್ರೇಷ್ಠ ಪ್ರದರ್ಶನ ಪುನರಾವರ್ತಿಸಲು ಸಜ್ಜಾಗಿದ್ದಾರೆ.

ಪುರುಷರ ಹಾಕಿ ತಂಡ: ಈವರ್ಷಾರಂಭದಲ್ಲಿ ಸ್ವದೇಶದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಭಾರತದ ಪುರುಷರ ಹಾಕಿ ತಂಡ ಈಗಲೂ ಚಿನ್ನದ ಗೆಲ್ಲುವ ನೆಚ್ಚಿನ ತಂಡವಾಗಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಜಯಿಸಿದ್ದು ಇದರಲ್ಲಿ ಎಲ್ಲ ಕಾಂಟಿನೆಂಟ್‌ನ ಎಲ್ಲರ ಪ್ರಮುಖ ತಂಡಗಳು ಭಾಗವಹಿಸಿದ್ದವು.

ಚೆಸ್ ಟೀಮ್: ಭಾರತದ ಚೆಸ್ ತಂಡದಲ್ಲಿ ಕೆಲವು ಭರವಸೆಯ ಹೆಸರುಗಳಿವೆ. ಡಿ. ಗುಕೇಶ್, ಆರ್. ಪ್ರಜ್ಞಾನಂದ, ವಿದಿತ್ ಗುಜರಾತಿ, ಅರ್ಜುನ್ ಎರಿಗೈಸಿ ಹಾಗೂ ಪೆಂಟಾಲಾ ಹರಿಕೃಷ್ಣ ಅವರು ಪುರುಷರ ತಂಡದಲ್ಲಿದ್ದಾರೆ. ವಿಶ್ವದ ಶ್ರೇಷ್ಠ ಮಹಿಳಾ ಆಟಗಾರ್ತಿಯರಾದ ಕೊನೆರು ಹಂಪಿ ಹಾಗೂ ಹರಿಕಾ ದ್ರೋಣವಲ್ಲಿ ಮಹಿಳಾ ತಂಡವನ್ನು ಮುನ್ನಡೆಸಲಿದ್ದಾರೆ.

ಪುರುಷರ ಕಬಡ್ಡಿ ತಂಡ: ಭಾರತೀಯ ಪುರುಷರ ಕಬಡ್ಡಿ ತಂಡ 2018ರ ಆವೃತ್ತಿಯನ್ನು ಹೊರತುಪಡಿಸಿ 1990ರಿಂದ ಪ್ರತಿ ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದೆ. 2018ರಲ್ಲಿ ಸೆಮಿ ಫೈನಲ್‌ನಲ್ಲಿ ಇರಾನ್ ವಿರುದ್ಧ ಸೋತಿದೆ. ಇತ್ತೀಚೆಗೆ ನಡೆದಿದ್ದ ಏಶ್ಯನ್ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾರತವು 8ನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮಹಿಳೆಯರ ಕ್ರಿಕೆಟ್ ತಂಡ: ನಾಯಕಿ ಹರ್ಮನ್‌ಪ್ರೀತ್ ಕೌರ್ ಅಮಾನತುಗೊಂಡಿರುವ ಕಾರಣ ಆರಂಭಿಕ ಕೆಲವು ಪಂದ್ಯಗಳಿಂದ ವಂಚಿತರಾಗಲಿದ್ದಾರೆ. ಆದರೆ ತಂಡವು ಚಿನ್ನದ ಪದಕ ಗೆಲ್ಲುವುದು ನಿಶ್ಚಿತವಾಗಿದೆ.

ಪುರುಷರ ಕ್ರಿಕೆಟ್ ತಂಡ: ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತದ ಟ್ವೆಂಟಿ-20 ಸ್ಟಾರ್‌ಗಳು ಏಶ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿದ್ದು ಅಗ್ರ ಸ್ಥಾನ ಪಡೆಯುವ ನಿಟ್ಟಿನಲ್ಲಿ ಪ್ರಬಲ ಸ್ಪರ್ಧಿಯಾಗಿದೆ.

ಫ್ಲ್ಯಾಶ್‌ಬ್ಯಾಕ್

ಭಾರತದ ಚೊಚ್ಚಲ ಚಿನ್ನ: ಏಶ್ಯನ್ ಗೇಮ್ಸ್‌ನ ಇತಿಹಾಸದಲ್ಲಿ ಭಾರತವು ಸ್ವಿಮ್ಮಿಂಗ್‌ನಲ್ಲಿ ಏಕೈಕ ಚಿನ್ನ ಜಯಿಸಿದೆ. ಸಚಿನ್ ನಾಗ್ ಈ ಸಾಧನೆ ಮಾಡಿದ್ದರು. ನಾಗ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದ ಪ್ರಧಾನಿ ನೆಹರೂ ಅವರನ್ನು ಅಪ್ಪಿಕೊಂಡಿದ್ದರು. ಅಷ್ಟಕ್ಕೂ ಇದು ಏಶ್ಯನ್ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ ಮೊತ್ತ ಮೊದಲ ಚಿನ್ನದ ಪದಕವಾಗಿದೆ. 1951ರಲ್ಲಿ ದಿಲ್ಲಿಯಲ್ಲಿ ನಡೆದಿದ್ದ ಏಶ್ಯನ್ ಗೇಮ್ಸ್‌ನಲ್ಲಿ ನಾಗ್ ಈ ಸಾಧನೆ ಮಾಡಿದ್ದರು. ಸ್ವಿಮ್ಮರ್ ನಾಗರ್ 4-100 ಮೀ. ಫ್ರೀಸ್ಟೈಲ್ ಹಾಗೂ 3-100 ಮೀ. ಮಿಡ್ಲೆಯಲ್ಲಿ ಎರಡು ಕಂಚಿನ ಪದಕ ಜಯಿಸಿದ್ದರು.

ಏಶ್ಯನ್ ಗೇಮ್ಸ್‌ನಲ್ಲಿ ಭಾರತದ ಯಾವೊಬ್ಬ ಸ್ಮಿಮ್ಮರ್ ಕೂಡ 3 ಪದಕಗಳನ್ನು ಜಯಿಸಿಲ್ಲ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News