ಕೊನೆಯ ಐಸಿಸಿ ಟೂರ್ನಿ ಆಡಲಿರುವ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಡೇಜ?

Update: 2025-02-15 20:42 IST
Virat Kohli , ROHITH SHARMA

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ |  PTI 

  • whatsapp icon

ಹೊಸದಿಲ್ಲಿ: ಟೀಮ್ ಇಂಡಿಯಾವು 2025ರ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿಗೆ ತಯಾರಿ ನಡೆಸುತ್ತಿದೆ. ಭಾರತದ ಮೂವರು ಸ್ಟಾರ್‌ಗಳಾದ-ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜರ ಪಾಲಿಗೆ ಇದು ಕೊನೆಯ ಐಸಿಸಿ ಟೂರ್ನಿಯಾಗುವ ಸಾಧ್ಯತೆಯಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

‘‘ಮುಂದಿನ ಐಸಿಸಿ ಟೂರ್ನಿಯು ಇನ್ನು ಎರಡು ವರ್ಷಗಳ ನಂತರ ನಡೆಯಲಿದೆ. ಮುಂದಿನ ದಿನಗಳಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ. ಹೀಗಾಗಿ ಭವಿಷ್ಯದ ಜಾಗತಿಕ ಪಂದ್ಯಾವಳಿಗಳಲ್ಲಿ ಈ ಮೂವರು ಭಾಗವಹಿಸುವ ಕುರಿತು ಅನಿಶ್ಚಿತತೆ ಇದೆ’’ಎಂದು ಚೋಪ್ರಾ ಹೇಳಿದ್ದಾರೆ.

ಮೂವರು ಹಿರಿಯ ಆಟಗಾರರ ಪಾಲಿಗೆ ಚಾಂಪಿಯನ್ಸ್ ಟ್ರೋಫಿಯು ಬಹುಶಃ ಕೊನೆಯ ಐಸಿಸಿ ಟೂರ್ನಿಯಾಗುವ ಸಾಧ್ಯತೆಯಿದೆ. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಯೂ ಟ್ಯೂಬ್ ಚಾನೆಲ್‌ ವೊಂದಕ್ಕೆ ಮಾತನಾಡುತ್ತಾ ಚೋಪ್ರಾ ಹೇಳಿದ್ದಾರೆ.

‘‘ಚಾಂಪಿಯನ್ಸ್ ಟ್ರೋಫಿ ಸದ್ಯದಲ್ಲೇ ನಡೆಯಲಿಕ್ಕಿದೆ. ಆ ನಂತರ ಈ ವರ್ಷ ಮತ್ತೊಂದು ಐಸಿಸಿ ಸ್ಪರ್ಧೆ ನಡೆಯಲಿದೆ. ಅದುವೇ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್. ಆದರೆ ಭಾರತವು ಈ ಟೂರ್ನಿಗೆ ಅರ್ಹತೆ ಪಡೆದಿಲ್ಲ. ಆದ್ದರಿಂದಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಗೆ ಇನ್ನೂ ಎರಡು ವರ್ಷಗಳ ತನಕ ಐಸಿಸಿ ಟೂರ್ನಿ ಆಡಲು ಸಾಧ್ಯವಾಗುತ್ತಿಲ್ಲ’’ ಎಂದು ಚೋಪ್ರಾ ಅಭಿಪ್ರಾಯ ಪಟ್ಟರು.

‘‘ಭಾರತವು 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾಗವಹಿಸಲಿದೆ. ಟಿ-20 ಮಾದರಿಯ ಕ್ರಿಕೆಟ್‌ನಿಂದ ಈ ಮೂವರು ಆಟಗಾರರು ಈಗಾಗಲೇ ನಿವೃತ್ತಿಯಾಗಿದ್ದಾರೆ. 2027ರಲ್ಲಿ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯಲಿದೆ. ಇನ್ನು ಎರಡು ವರ್ಷಗಳಲ್ಲಿ ತಂಡದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೋಡಬಹುದು. 2027ರ ವೇಳೆಗೆ ವಿಶ್ವವೇ ವಿಭಿನ್ನವಾಗಿ ಕಾಣಬಹುದು. ಕೆಲವು ಅಟಗಾರರು ಇದುವೇ ನಮ್ಮ ಕೊನೆಯ ಐಸಿಸಿ ಟೂರ್ನಿ ಎಂದು ಭಾವಿಸಿರಬಹುದು’’ ಎಂದು ಚೋಪ್ರಾ ಹೇಳಿದರು.

‘‘ಭಾರತೀಯ ಕ್ರಿಕೆಟ್ ತಂಡದಲ್ಲಿ ರೋಹಿತ್, ಕೊಹ್ಲಿ ಹಾಗೂ ಜಡೇಜ ಮುಂದುವರಿಯುವುದು ಅವರ ಆಡುವ ಸಾಮರ್ಥ್ಯವನ್ನು ಅವಲಂಬಿಸಿದೆ. ಈ ಆಟಗಾರರು 2027ರ ವರೆಗೆ ಮುಂದುವರಿಯಬಹುದೇ ಎಂಬುದು ಪ್ರಶ್ನೆಯಲ್ಲ. ಭಾರತೀಯ ಕ್ರಿಕೆಟ್ ಅವರಿಲ್ಲದೆ ಉಳಿಯಬಹುದೇ ಇಲ್ಲವೇ ಎಂಬುದು ನಿಜವಾದ ಪ್ರಶ್ನೆ’’ ಎಂದು ಅವರು ವಿವರಿಸಿದರು.

ದುಬೈನಲ್ಲಿ ಫೆಬ್ರವರಿ 20ರಂದು ಬಾಂಗ್ಲಾದೇಶ ವಿರುದ್ಧ ಆಡುವ ಮೂಲಕ ಭಾರತ ಕ್ರಿಕೆಟ್ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಬಹುಶಃ ಕೊನೆಯ ಬಾರಿ ಐಸಿಸಿ ಟೂರ್ನಮೆಂಟ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಕೊಹ್ಲಿ, ರೋಹಿತ್ ಹಾಗೂ ಜಡೇಜ ಅವರತ್ತ ಎಲ್ಲರ ಗಮನ ಹರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News