ವಿಂಬಲ್ಡನ್ ಚಾಂಪಿಯನ್ ಶಿಪ್: ಆ್ಯಂಡಿ ಮರ್ರೆ ಎರಡನೇ ಸುತ್ತಿಗೆ
ಹೊಸದಿಲ್ಲಿ: ಬಹು ನಿರೀಕ್ಷಿತ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಆ್ಯಂಡಿ ಮರ್ರೆ ಬ್ರಿಟನ್ ನ ರಿಯಾನ್ ಪೆನಿಸ್ಟನ್ ರನ್ನು ನೇರ ಸೆಟ್ ಗಳ ಅಂತರದಿಂದ ಮಣಿಸಿ ವಿಂಬಲ್ಡನ್ ಚಾಂಪಿಯನ್ ಶಿಪ್ ನಲ್ಲಿ ಎರಡನೇ ಸುತ್ತಿಗೆ ತಲುಪಿದರು.
2013ರಲ್ಲಿ ತನ್ನ ಮೊದಲ ವಿಂಬಲ್ಡನ್ ಪ್ರಶಸ್ತಿ ಜಯಿಸಿದ್ದ ಮಾಜಿ ವಿಶ್ವದ ನಂ.1 ಆಟಗಾರ ಮರ್ರೆ 6-3, 6-0,6-1 ಸೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದರು.
ಸದ್ಯ 40ನೇ ರ್ಯಾಂಕಿನಲ್ಲಿರುವ ಮರ್ರೆ ವೈರ್ಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದಿದ್ದ 268ನೇ ರ್ಯಾಂಕಿನ ಪೆನಿಸ್ಟನ್ ವಿರುದ್ಧ ಸುಲಭ ಜಯ ದಾಖಲಿಸಿದರು. 36ರ ವಯಸ್ಸಿನ ಮರ್ರೆ ಮುಂದಿನ ಸುತ್ತಿನಲ್ಲಿ ಐದನೇ ರ್ಯಾಂಕಿನ ಸ್ಟೆಫನೊಸ್ ಸಿಟ್ಸಿಪಾಸ್ ಅಥವಾ ಮಾಜಿ ಯುಎಸ್ ಓಪನ್ ಚಾಂಪಿಯನ್ ಡೊಮಿನಿಕ್ ಥೀಮ್ರನ್ನು ಎದುರಿಸಲಿದ್ದಾರೆ.
ಅಗ್ರ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಝ್ ಫ್ರೆಂಚ್ನ ಹಿರಿಯ ಆಟಗಾರ ಜೆರೆಮಿ ಚಾರ್ಡಿ ಅವರನ್ನು ಸೋಲಿಸಿ ವಿಂಬಲ್ಡನ್ ಅಭಿಯಾನವನ್ನು ತನ್ನದೇ ಶೈಲಿಯಲ್ಲಿ ಆರಂಭಿಸಿದರು. ಮಂಗಳವಾರ ನಡೆದ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ 20ರ ಹರೆಯದ ಸ್ಪೇನ್ ಆಟಗಾರ ಅಲ್ಕರಾಝ್ ಅವರು ಚಾರ್ಡಿ ಅವರನ್ನು 6-0, 6-2 ಹಾಗೂ 7-5 ಸೆಟ್ಗಳ ಅಂತರದಿಂದ ಮಣಿಸಿದರು. ಯುಎಸ್ ಓಪನ್ ಚಾಂಪಿಯನ್ ಅಲ್ಕರಾಝ್ ಕ್ವೀನ್ಸ್ ಕ್ಲಬ್ ಪ್ರಶಸ್ತಿಯನ್ನು ಜಯಿಸಿದ ನಂತರ ಇತ್ತೀಚೆಗೆ ಎಟಿಪಿ ರ್ಯಾಂಕಿಂಗ್ನಲ್ಲಿ ಅಗ್ರಸ್ಥಾನ ವಶಪಡಿಸಿಕೊಂಡಿದ್ದರು.
ಆರಂಭಿಕ ಆಘಾತದಿಂದ ಚೇತರಿಸಿಕೊಂಡ ಹಾಲಿ ಚಾಂಪಿಯನ್ ರೆಬಾಕಿನಾ
ಹಾಲಿ ಚಾಂಪಿಯನ್ ಎಲೆನಾ ರೈಬಾಕಿನಾ ಆರಂಭಿಕ ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಶುಭಾರಂಭ ಮಾಡಿದರು. ಮಹಿಳೆಯರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ರೈಬಾಕಿನಾ ಅಮೆರಿಕದ ಅನುಭವಿ ಆಟಗಾರ್ತಿ ಶೆಲ್ಬಿ ರೋಜರ್ಸ್ರನ್ನು 4-6, 6-1, 6-2 ಸೆಟ್ಗಳ ಅಂತರದಿಂದ ಮಣಿಸಿದರು. 24ರ ಹರೆಯದ ಕಝಖ್ ಆಟಗಾರ್ತಿ ಮುಂದಿನ ಸುತ್ತಿನಲ್ಲಿ ಫ್ರಾನ್ಸ್ನ ಅಲಿಝ್ ಕಾರ್ನೆಟ್ ಅಥವಾ ಜಪಾನ್ನ ನವೊ ಹಿಬಿನೊರನ್ನು ಎದುರಿಸಲಿದ್ದಾರೆ.
ಡರಿಯಾ ಕಸಟ್ಕಿನಾ ಮೂರನೇ ಸುತ್ತಿಗೆ ಲಗ್ಗೆ ಗೆ
ಬ್ರಿಟನ್ ನ ವೈರ್ಲ್ಡ್ಕಾರ್ಡ್ ಆಟಗಾರ್ತಿ ಜೊಡಿ ಬುರೆಜ್ರನ್ನು 6-0, 6-2 ಸೆಟ್ಗಳ ಅಂತರದಿಂದ ಮಣಿಸಿರುವ ಡರಿಯಾ ಕಸಟ್ಕಿನಾ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ 3ನೇ ಸುತ್ತು ತಲುಪಿದ್ದಾರೆ. ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ 2ನೇ ಸುತ್ತಿನ ಪಂದ್ಯದಲ್ಲಿ ರಶ್ಯದ ಆಟಗಾರ್ತಿ ಒಂದು ಗಂಟೆಯೊಳಗೆ ಗೆಲುವು ದಾಖಲಿಸಿದರು. ಕಸಟ್ಕಿನಾ 2018ರಲ್ಲಿ ವಿಂಬಲ್ಡನ್ ಚಾಂಪಿಯನ್ಶಿಪ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಈ ಬಾರಿ ಉತ್ತಮ ಪ್ರದರ್ಶನದ ಯೋಜನೆಯಲ್ಲಿದ್ದಾರೆ.