ಮಹಿಳಾ ಟಿ20 ವಿಶ್ವಕಪ್ ಆಯೋಜನೆಗೆ ಝಿಂಬಾಬ್ವೆ ಉತ್ಸುಕ!

Update: 2024-08-17 17:00 GMT

ದುಬೈ : ಈ ಬಾರಿಯ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ಆಯೋಜಿಸುವ ಪ್ರಮುಖ ದೇಶವಾಗಿ ಝಿಂಬಾಬ್ವೆ ಹೊರಹೊಮ್ಮಿದೆ. ಈ ಮೊದಲು, ಪಂದ್ಯಾವಳಿಯು ಬಾಂಗ್ಲಾದೇಶದಲ್ಲಿ ಅಕ್ಟೋಬರ್ 3ರಂದು ಆರಂಭಗೊಳ್ಳಲು ನಿಗದಿಯಾಗಿತ್ತು. ಆದರೆ ಆ ದೇಶದಲ್ಲಿ ಇತ್ತೀಚೆಗೆ ನಡೆದ ಸರಕಾರ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಲ್ಲಿ ಅಸ್ಥಿರ ಪರಿಸ್ಥಿತಿ ನೆಲೆಸಿರುವುದರಿಂದ ಪಂದ್ಯಾವಳಿಯ ಆತಿಥ್ಯವು ವರ್ಗಾವಣೆಗೊಳ್ಳಬಹುದಾಗಿದೆ.

ಪರ್ಯಾಯ ಆತಿಥೇಯ ದೇಶವಾಗಿ, ಝಿಂಬಾಬ್ವೆಯ ಜೊತೆಗೆ ಯುಎಇಯನ್ನೂ ಪರಿಗಣಿಸಲಾಗುತ್ತಿದೆ ಎಂದು ಇ ಎಸ್‌ ಪಿ ಎನ್‌ ಕ್ರಿಕ್‌ ಇನ್ಫೊ ವರದಿಯೊಂದು ತಿಳಿಸಿದೆ. ಪಂದ್ಯಾವಳಿಯ ಆತಿಥ್ಯ ವಹಿಸದಿರಲು ಭಾರತ ಈಗಾಗಲೇ ನಿರ್ಧರಿಸಿದೆ.

ಈ ವಿಷಯದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯು ಆಗಸ್ಟ್ 20ರಂದು ಅಂತಿಮ ನಿರ್ಧಾರವೊಂದನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ.

2018 ಮತ್ತು 2023ರಲ್ಲಿ ಏಕದಿನ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯಗಳನ್ನು ಯಶಸ್ವಿಯಾಗಿ ಆಯೋಜಿಸಿರುವ ಝಿಂಬಾಬ್ವೆಯು ತನ್ನ ಕ್ರಿಕೆಟ್ ಮೂಲಸೌಕರ್ಯ ಮತ್ತು ಆತಿಥ್ಯವನ್ನು ದೊಡ್ಡ ವೇದಿಕೆಯಲ್ಲಿ ಪ್ರದರ್ಶಿಸುವ ಅವಕಾಶವನ್ನು ಬಳಸಿಕೊಳ್ಳಲು ಮುಂದಾಗಿದೆ.

ಝಿಂಬಾಬ್ವೆಯು 2003ರಲ್ಲಿ ದಕ್ಷಿಣ ಆಫ್ರಿಕ ಮತ್ತು ಕೆನ್ಯ ದೇಶಗಳ ಜೊತೆಗೆ ವಿಶ್ವಕಪ್ ಆಯೋಜಿಸಿತ್ತು. ಆ ಬಳಿಕ, ರಾಜಕೀಯ ಮತ್ತು ಆಡಳಿತಾತ್ಮಕ ಅಸ್ಥಿರತೆಗಳಿಂದಾಗಿ ಅಲ್ಲಿ ಜಾಗತಿಕ ಮಟ್ಟದ ಕ್ರೀಡಾಕೂಟಗಳು ನಡೆದಿಲ್ಲ.

ಝಿಂಬಾಬ್ವೆಯ ಮಹಿಳಾ ತಂಡವು ವಿಶ್ವಕಪ್‌ನಲ್ಲಿ ಯಾವತ್ತೂ ಸ್ಪರ್ಧಿಸಿಲ್ಲ. ಈ ಬಾರಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಾವಳಿಯನ್ನು ತಟಸ್ಥ ನೆಲೆಯಲ್ಲಿ ಆಯೋಜಿಸಲು ಅದು ಮುಂದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News