ವಿಶ್ವಕಪ್ 2023: ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವತ್ತ ಇಂಗ್ಲೆಂಡ್ ಗಮನ

Update: 2023-11-03 16:45 GMT

Photo: twitter/englandcricket

ಹೊಸದಿಲ್ಲಿ : ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯಲ್ಲಿ ಇಂಗ್ಲೆಂಡ್ ನ ಸೆಮಿ ಫೈನಲ್ ಆಸೆ ಬಹುತೇಕ ಕಮರಿದೆ. ಆದರೂ ಇಂಗ್ಲೆಂಡ್ ತನ್ನ ಮುಂದಿನ ಮೂರು ಪಂದ್ಯಗಳನ್ನು ಕಡ್ಡಾಯವಾಗಿ ಗೆಲ್ಲಬೇಕಾದ ಒತ್ತಡಕ್ಕೆ ಸಿಲುಕಿದೆ.

ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಇಂಗ್ಲೆಂಡ್ ತನ್ನ ಅನಿರೀಕ್ಷಿತ ಪ್ರದರ್ಶನದದಿಂದ ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ. ಈ ಕಳಪೆ ಪ್ರದರ್ಶನ ಹೊರತಾಗಿಯೂ ಕಡೆ ಪಕ್ಷ 2025 ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಗಿಟ್ಟಿಸಿಕೊಳ್ಳಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ಇಂಗ್ಲೆಂಡ್ ತಲುಪಿದೆ.

ಇಂಗ್ಲೆಂಡ್ ತನ್ನ ಮುಂದಿನ ಪಂದ್ಯವನ್ನು ಆಸ್ಟ್ರೇಲಿಯ, ನೆದರ್ಲ್ಯಾಂಡ್ಸ್, ಪಾಕಿಸ್ತಾನದ ವಿರುದ್ಧ ಕ್ರಮವಾಗಿ ನವೆಂಬರ್ 04, 08 ,11 ರಂದು ಆಡಲಿದೆ.

2025 ರಲ್ಲಿ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಗೆ ಅರ್ಹತೆ ಪಡೆದುಕೊಳ್ಳಬೇಕಾದರೆ ಐಸಿಸಿ ಮಾನದಂಡದ ಪ್ರಕಾರ ಏಕದಿನ ವಿಶ್ವಕಪ್ ಅಂಕ ಪಟ್ಟಿಯಲ್ಲಿ ಅಗ್ರ ಎಂಟರೊಳಗೆ ಸೇರಿಕೊಳ್ಳುವುದು ಅನಿವಾರ್ಯವಾಗಿದೆ.

ಈ ಬಗ್ಗೆ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ, ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕೆಲ್ ಅಥರ್ಟನ್ ಅವರು ಇಂಗ್ಲೆಂಡ್ ಸೆಮಿಫೈನಲ್ ಭರವಸೆಗಳು ಮಂಕಾಗಿರುವುದರಿಂದ ತಂಡವು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯುವ ಗುರಿಯನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಇಂಗ್ಲೆಂಡ್ ಪ್ರಸ್ತುತ 6 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಇದಕ್ಕೂ ಮೊದಲು ಈ ಬಾರಿಯ ಏಕದಿನ ವಿಶ್ವಕಪ್ ಗೆ ಮೊದಲೆರಡು ಋತುವಿನ ಚಾಂಪಿಯನ್ ತಂಡ ವೆಸ್ಟ್ ಇಂಡೀಸ್ ಟೂರ್ನಿಗೆ ಅರ್ಹತೆ ಪಡೆಯದೆ ಮೊದಲ ಸಲ ವಿಶ್ವಕಪ್ ಕೂಟದಿಂದ ಹೊರಬಿದ್ದಿತ್ತು. ಪರಿಣಾಮ ಕ್ರಿಕೆಟ್ ಅಭಿಮಾನಿಗಳು ವಿಂಡೀಸ್ ದಾಂಢಿಗರ ಹೊಡಿಬಡಿ ಆಟ ಮಿಸ್ ಮಾಡಿಕೊಂಡು ನಿರಾಶರಾದರು. ಅಲ್ಲದೇ ಏಕದಿನ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಿಕೊಳ್ಳದ ಕಾರಣ ಮುಂದಿನ ಚಾಂಪಿಯನ್ಸ್ ಟ್ರೋಫಿಯಿಂದಲೂ ಅವರು ಹೊರಬಿದ್ದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News