ನಾಳೆಯಿಂದ (ಜೂ.2) ವಿಶ್ವಕಪ್ ಟೂರ್ನಿ ಆರಂಭ: ಗೆಲುವಿನ ಆರಂಭದತ್ತ ವೆಸ್ಟ್‌ಇಂಡೀಸ್, ಅಮೆರಿಕ ಚಿತ್ತ

Update: 2024-06-01 22:08 IST
ನಾಳೆಯಿಂದ (ಜೂ.2) ವಿಶ್ವಕಪ್ ಟೂರ್ನಿ ಆರಂಭ: ಗೆಲುವಿನ ಆರಂಭದತ್ತ ವೆಸ್ಟ್‌ಇಂಡೀಸ್, ಅಮೆರಿಕ ಚಿತ್ತ

ಸಾಂದರ್ಭಿಕ ಚಿತ್ರ|  PC : NDTV 

  • whatsapp icon

ಗಯಾನ: ಗಯಾನದ ಜಾರ್ಜ್‌ಟೌನ್‌ನಲ್ಲಿ ಪಪುವಾ ನ್ಯೂಗಿನಿ ತಂಡವನ್ನು ರವಿವಾರ ಎದುರಿಸಲಿರುವ ಆತಿಥೇಯ ವೆಸ್ಟ್‌ಇಂಡೀಸ್ ತಂಡ 9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಎಂಟು ವರ್ಷಗಳ ಹಿಂದೆ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಕಾರ್ಲೊಸ್ ಬ್ರಾತ್‌ವೇಟ್ ಸಿಡಿಸಿದ 4 ಸಿಕ್ಸರ್‌ಗಳ ನೆರವಿನಿಂದ ಎರಡನೇ ಬಾರಿ ಟಿ-20 ವಿಶ್ವಕಪ್ ಜಯಿಸಿದ್ದ ವೆಸ್ಟ್‌ಇಂಡೀಸ್ ಈ ಬಾರಿ ಪ್ರಶಸ್ತಿ ಎತ್ತುವ ವಿಶ್ವಾಸದಲ್ಲಿದೆ.

2016ರಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಎಸೆದ ಕೊನೆಯ ಓವರ್‌ನಲ್ಲಿ ಬ್ರಾತ್‌ವೇಟ್ ಸತತ 4 ಸಿಕ್ಸರ್‌ಗಳನ್ನು ಸಿಡಿಸಿದ್ದರು. ವೆಸ್ಟ್‌ಇಂಡೀಸ್ ತಂಡ ಎರಡನೇ ಬಾರಿ ಟಿ-20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿತ್ತು. ವಿಂಡೀಸ್ 2012ರಲ್ಲಿ ಮೊದಲ ಬಾರಿ ವಿಶ್ವಕಪ್ ಗೆದ್ದುಕೊಂಡಿತ್ತು.

ಆನಂತರ ವೆಸ್ಟ್‌ಇಂಡೀಸ್ ತಂಡ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. 2021ರ ವಿಶ್ವಕಪ್‌ನಲ್ಲಿ 5 ಪಂದ್ಯಗಳಲ್ಲಿ 4ರಲ್ಲಿ ಸೋತಿದ್ದ ವೆಸ್ಟ್‌ಇಂಡೀಸ್ ತಂಡ ಸೂಪರ್-12ರಿಂದ ನಿರ್ಗಮಿಸಿತ್ತು.

ಆಸ್ಟ್ರೇಲಿಯದಲ್ಲಿ ನಡೆದಿದ್ದ 2022ರ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದ ವೆಸ್ಟ್‌ಇಂಡೀಸ್ ತಂಡವು ಕ್ರಿಕೆಟ್ ಶಿಶುಗಳಾದ ಸ್ಕಾಟ್‌ಲ್ಯಾಂಡ್ ಹಾಗೂ ಐರ್‌ಲ್ಯಾಂಡ್ ವಿರುದ್ಧ ಆಘಾತಕಾರಿ ಸೋಲನುಭವಿದ ನಂತರ ಪ್ರಮುಖ ಹಂತದಿಂದ ನಿರ್ಗಮಿಸಿತ್ತು.

ಈ ಬಾರಿ ಸ್ವದೇಶದಲ್ಲಿ ವಿಶ್ವಕಪ್ ನಡೆಯುತ್ತಿರುವ ಹಿನ್ನೆಲೆಯಲ್ಲಿ ವೆಸ್ಟ್‌ಇಂಡೀಸ್ ತಂಡ ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ನೀಡಿದ್ದ ಸ್ಮರಣೀಯ ಪ್ರದರ್ಶನವನ್ನು ಪುನರಾವರ್ತಿಸಲು ಎದುರು ನೋಡುತ್ತಿದೆ.

ರೋವ್‌ಮನ್ ಪೊವೆಲ್ ನೇತೃತ್ವದ ವೆಸ್ಟ್‌ಇಂಡೀಸ್ ತಂಡ ಆಸ್ಟ್ರೇಲಿಯ ವಿರುದ್ಧದ ಅಭ್ಯಾಸ ಪಂದ್ಯವನ್ನು ಗೆದ್ದುಕೊಂಡಿದೆ. ವೆಸ್ಟ್‌ಇಂಡೀಸ್ ಎರಡು ಟಿ-20 ವಿಶ್ವಕಪ್ ಗೆದ್ದಾಗ ನಾಯಕನಾಗಿದ್ದ ಡರೆನ್ ಸಮ್ಮಿ ಈ ಬಾರಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.

ಮಧ್ಯಮ ಸರದಿಯಲ್ಲಿ ನಿಕೊಲಸ್ ಪೂರನ್ ಪ್ರಮುಖ ಆಟಗಾರನಾಗಿದ್ದಾರೆ. ವೆಸ್ಟ್‌ಇಂಡೀಸ್ ಟೂರ್ನಮೆಂಟ್‌ನಲ್ಲಿ ಬಲಿಷ್ಠ ಬ್ಯಾಟಿಂಗ್ ಸರದಿಯನ್ನು ಹೊಂದಿದೆ. ಪೊವೆಲ್, ಆಂಡ್ರೆ ರಸೆಲ್, ಶಿಮ್ರೊನ್ ಹೆಟ್ಮೆಯರ್, ಶೆರ್ಫಾನ್ ರುದರ್‌ಫೋರ್ಡ್ ಹಾಗೂ ರೊಮಾರಿಯೊ ಶೆಫರ್ಡ್ ಅವರಿದ್ದಾರೆ.

ಇತ್ತೀಚೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ ಮೂರನೇ ಬಾರಿ ಐಪಿಎಲ್ ಚಾಂಪಿಯನ್‌ಶಿಪ್ ಪ್ರಶಸ್ತಿ ಗೆಲ್ಲಲು ನೆರವಾಗಿದ್ದ ರಸೆಲ್ ಬ್ಯಾಟ್ ಹಾಗೂ ಬಾಲ್‌ನಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಸ್ವದೇಶದಲ್ಲಿ ಟಿ-20 ವಿಶ್ವಕಪ್ ಜಯಿಸಿದ ಮೊದಲ ತಂಡ ಎನಿಸಿಕೊಳ್ಳುವ ಮೂಲಕ ವೆಸ್ಟ್‌ಇಂಡೀಸ್ ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.

ಎಡಗೈ ವೇಗದ ಬೌಲರ್ ಒಬೆಡ್ ಮೆಕ್‌ಕಾಯ್ ಗಾಯಗೊಂಡಿರುವ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಬದಲಿಗೆ ಆಡಲಿದ್ದಾರೆ.

ಅಸ್ಸದುಲ್ಲಾ ವಾಲಾ ನೇತೃತ್ವದ ಪಿಎನ್‌ಐ ತಂಡ 2021ರ ನಂತರ ವಿಶ್ವಕಪ್‌ಗೆ ವಾಪಸಾಗುತ್ತಿದೆ. 2023ರ ಜುಲೈನಲ್ಲಿ ಈಸ್ಟ್ ಏಶ್ಯ ಪೆಸಿಫಿಕ್ ರೀಜನಲ್ ಫೈನಲ್‌ಗೆ ಅರ್ಹತೆ ಪಡೆಯುವ ಮೂಲಕ ವಿಶ್ವಕಪ್‌ಗೆ ತೇರ್ಗಡೆಯಾಗಿತ್ತು.

*ಪಂದ್ಯ ಆರಂಭದ ಸಮಯ: ರಾತ್ರಿ 8:00(ಭಾರತೀಯ ಕಾಲಮಾನ)

ಉದ್ಘಾಟನಾ ಪಂದ್ಯದಲ್ಲಿ ಕೆನಡಾ ವಿರುದ್ಧ ಅಮೆರಿಕ ಫೇವರಿಟ್:

9ನೇ ಆವೃತ್ತಿಯ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನ ಉದ್ಘಾಟನಾ ಪಂದ್ಯದಲ್ಲಿ ಸಹ ಆತಿಥ್ಯ ತಂಡ ಅಮೆರಿಕ ತಂಡ ಕೆನಡಾ ತಂಡವನ್ನು ಎದುರಿಸಲಿದೆ. ಅಮೆರಿಕ ಪಂದ್ಯ ಗೆಲ್ಲುವ ನೆಚ್ಚಿನ ತಂಡವಾಗಿದೆ.

ಆಸ್ಟ್ರೇಲಿಯದ ಮಾಜಿ ಬ್ಯಾಟರ್ ಸ್ಟುವರ್ಟ್ ಲಾ ಅಮೆರಿಕ ತಂಡದ ನೇತೃತ್ವವಹಿಸಿದ್ದಾರೆ.

ವಿಶ್ವಕಪ್‌ಗಿಂತ ಮೊದಲು ಅಮೆರಿಕ ತಂಡವು ಬಾಂಗ್ಲಾದೇಶ ವಿರುದ್ಧ ಟಿ-20 ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತ್ತು. ಈ ಮೂಲಕ ತಮ್ಮನ್ನು ಹಗುರವಾಗಿ ಪರಿಗಣಿಸುವಂತಿಲ್ಲ ಎಂಬ ಸಂದೇಶ ರವಾನಿಸಿದೆ. ಇತ್ತೀಚೆಗೆ ಕೆನಡಾ ವಿರುದ್ಧ 4-0 ಅಂತರದ ಗೆಲುವು ಅಮೆರಿಕ ತಂಡಕ್ಕೆ ಲಾಭ ತರಲಿದೆ.

ನ್ಯೂಝಿಲ್ಯಾಂಡ್‌ನ ಮಾಜಿ ಆಟಗಾರ ಹಾಗೂ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಕೋರಿ ಆ್ಯಂಡರ್ಸನ್ ತಂಡಕ್ಕೆ ಬಲ ನೀಡಲಿದ್ದಾರೆ. ಬ್ಯಾಟರ್ ಹಾಗೂ ವಿಕೆಟ್‌ಕೀಪರ್ ಮೊನಾಂಕ್ ಪಟೇಲ್ ಅಮೆರಿಕ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.

ಗುಜರಾತ್‌ನ ಆನಂದ್‌ನಲ್ಲಿ ಜನಿಸಿದ್ದ ಪಟೇಲ್ ತನ್ನ ರಾಜ್ಯದ ಪರ ವಯೋಮಿತಿ ಮಟ್ಟದ ಟೂರ್ನಿಗಳಲ್ಲಿ ಆಡಿದ್ದರು. 2016ರಲ್ಲಿ ಅಮೆರಿಕಕ್ಕೆ ತಮ್ಮ ವಾಸ್ತವ್ಯ ಬದಲಾಯಿಸಿದ್ದರು.

2018ರಲ್ಲಿ ಅಮೆರಿಕ ತಂಡ ವಿಶ್ವಕಪ್ ಟಿ-20ಗೆ ಅರ್ಹತೆ ಪಡೆದಾಗ ಮೊನಾಂಕ್ ಆರು ಇನಿಂಗ್ಸ್‌ಗಳಲ್ಲಿ 208 ರನ್ ಗಳಿಸಿ ಅಗ್ರ ರನ್ ಸ್ಕೋರರ್ ಎನಿಸಿಕೊಂಡಿದ್ದರು. 2019ರಲ್ಲಿ ಯುಎಇನಲ್ಲಿ ಪಟೇಲ್ ಟ್ವೆಂಟಿ-20 ಪಂದ್ಯಕ್ಕೆ ಕಾಲಿಟ್ಟಿದ್ದರು.

ಮುಂಬೈ ಹಾಗೂ ರಾಜಸ್ಥಾನ ರಾಯಲ್ಸ್‌ನ ಮಾಜಿ ಎಡಗೈ ಸ್ಪಿನ್ನರ್ ಹರ್ಮೀತ್ ಸಿಂಗ್ ಹಾಗೂ ಡೆಲ್ಲಿ ಹಾಗೂ ಆರ್‌ಸಿಬಿಯ ಮಾಜಿ ಬ್ಯಾಟರ್ ಮಿಲಿಂದ್ ಕುಮಾರ್ ಅಮೆರಿಕ ತಂಡದಲ್ಲಿದ್ದಾರೆ.

ಅಮೆರಿಕದ ಪರ ಗರಿಷ್ಠ ಕ್ರಿಕೆಟ್ ಪಂದ್ಯಗಳನ್ನಾಡಿರುವ ಆ್ಯರೊನ್ ಜೋನ್ಸ್ ತಂಡದಲ್ಲಿದ್ದಾರೆ. ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಂಡದ ಪರ ಗರಿಷ್ಠ ರನ್ ಗಳಿಸಿರುವ ಸ್ಟೀವನ್ ಟೇಲರ್ ಹಾಗೂ ಸೌರಭ್ ನೆತ್ರವಲ್ಕರ್ ಅಮೆರಿಕವನ್ನು ಪ್ರತಿನಿಧಿಸಲಿದ್ದಾರೆ.

2012 ಹಾಗೂ 2019ರ ನಡುವೆ 18 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಕೆನಡಾವನ್ನು ಪ್ರತಿನಿಧಿಸಿರುವ ಆಲ್‌ರೌಂಡರ್ ನಿತಿಶ್ ಕುಮಾರ್ ಈ ಬಾರಿ ತಂಡವನ್ನು ಬದಲಾಯಿಸಿದ್ದು, ಅಮೆರಿಕದ ಜೆರ್ಸಿ ಧರಿಸಲಿದ್ದಾರೆ. ಈ ವರ್ಷದ ಎಪ್ರಿಲ್‌ನಲ್ಲಿ ಕೆನಡಾ ವಿರುದ್ಧ ಅಮೆರಿಕದ ಪರ ಮೊದಲ ಟಿಸ-20 ಪಂದ್ಯ ಆಡಿದ್ದರು.

20 ವರ್ಷದೊಳಗಿನ ನಾಲ್ವರು ಆಟಗಾರರನ್ನು ಒಳಗೊಂಡಿರುವ ಕೆನಡಾ ತಂಡ ಎಡಗೈ ವೇಗದ ಬೌಲರ್ ಕಲೀಮ್ ಸಾನಾ ಹಾಗೂ ಅಗ್ರ ಸರದಿಯ ಬ್ಯಾಟರ್ ಆರೊನ್ ಜಾನ್ಸನ್‌ರನ್ನು ಹೆಚ್ಚು ಅವಲಂಬಿಸಿದೆ. ಎಡಗೈ ಸ್ಪಿನ್ನರ್ ಸಾದ್ ಬಿನ್ ಝಾಫರ್ ನಾಯಕತ್ವದ ಮೂಲಕ ತಂಡವನ್ನು ಮುನ್ನಡೆಸಲಿದ್ದಾರೆ.

ಪಂದ್ಯ ಆರಂಭದ ಸಮಯ: ಬೆಳಗ್ಗೆ 6:00

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News