ಟಿ20 ವಿಶ್ವಕಪ್‍ಗೆ ಯುವರಾಜ್ ಸಿಂಗ್ ರಾಯಭಾರಿ

Update: 2024-04-26 17:28 GMT

ಯುವರಾಜ್ ಸಿಂಗ್‍ | PC : PTI 

ದುಬೈ: ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್‍ರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ರಾಯಭಾರಿಯಾಗಿ ನೇಮಿಸಲಾಗಿದೆ. ಜಾಗತಿಕ ಕ್ರಿಕೆಟ್ ಪಂದ್ಯಾವಳಿಯ ಆರಂಭಕ್ಕೆ ಕೇವಲ 36 ದಿನಗಳು ಉಳಿದಿರುವಂತೆಯೇ ಈ ಘೋಷಣೆಯನ್ನು ಮಾಡಲಾಗಿದೆ.

2007ರ ಪುರುಷರ ಟಿ20 ವಿಶ್ವಕಪ್‍ನಲ್ಲಿ ಓವರೊಂದರಲ್ಲಿ ಆರು ಸಿಕ್ಸ್ ಗಳನ್ನು ಸಿಡಿಸಿದ ಯುವರಾಜ್‍ರ ಐತಿಹಾಸಿಕ ಸಾಧನೆಯನ್ನು ಸ್ಮರಿಸಿ ಅವರನ್ನು 2024ರ ಪಂದ್ಯಾವಳಿಗೆ ರಾಯಭಾರಿಯಾಗಿ ಘೋಷಿಸಲಾಗಿದೆ. 2007ರಲ್ಲಿ ಭಾರತವು ಪಂದ್ಯಾವಳಿಯನ್ನು ಗೆದ್ದಿತ್ತು.

ಯುವರಾಜ್ ಜೊತೆಗೆ, ವೆಸ್ಟ್ ಇಂಡೀಸ್‍ನ ಕ್ರಿಕೆಟ್ ತಾರೆ ಕ್ರಿಸ್ ಗೇಲ್ ಮತ್ತು 8 ಒಲಿಂಪಿಕ್ಸ್ ಚಿನ್ನ ವಿಜೇತ ಉಸೇನ್ ಬೋಲ್ಟ್‍ರನ್ನೂ ಈ ಪಂದ್ಯಾವಳಿಯ ರಾಯಭಾರಿಗಳಾಗಿ ಘೋಷಿಸಲಾಗಿದೆ.

ಅವರು ರಾಯಭಾರಿಯಾಗಿ, ಟಿ20 ವಿಶ್ವಕಪ್‍ಗೆ ಮುನ್ನ ಮತ್ತು ವಿಶ್ವಕಪ್ ನಡೆಯುವ ಅವಧಿಯಲ್ಲಿ ಅಮೆರಿಕದಲ್ಲಿ ವಿವಿಧ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

“ನನ್ನ ಕ್ರಿಕೆಟ್ ಜೀವನದ ಅತ್ಯಂತ ಪ್ರಿಯವಾದ ನೆನಪುಗಳು ಇರುವುದು ಟಿ20 ವಿಶ್ವಕಪ್‍ನಲ್ಲಿ. ಒಂದು ಓವರ್ ನಲ್ಲಿ ಆರು ಸಿಕ್ಸರ್‌ ಗಳನ್ನು ಸಿಡಿಸಿರುವುದು ಅವುಗಳ ಪೈಕಿ ಒಂದು. ಹಾಗಾಗಿ, ಈ ಕ್ರಿಕೆಟ್ ಪಂದ್ಯಾವಳಿಯ ಭಾಗವಾಗಿರುವುದಕ್ಕೆ ನನಗೆ ರೋಮಾಂಚನವಾಗಿದೆ’’ ಎಂದು ಭಾರತದ ಮಾಜಿ ಆಲ್‍ರೌಂಡರ್ ಯುವರಾಜ್ ಸಿಂಗ್ ಹೇಳಿದರು.

“ಕ್ರಿಕೆಟ್ ಆಡಲು ವೆಸ್ಟ್ ಇಂಡೀಸ್ ಶ್ರೇಷ್ಠ ಸ್ಥಳವಾಗಿದೆ. ಜಗತ್ತಿನ ಆ ಭಾಗದಲ್ಲಿ ಪಂದ್ಯಗಳನ್ನು ನೋಡಲು ಬರುವ ಅಭಿಮಾನಿಗಳ ಸಡಗರವು ವಿಶಿಷ್ಟ ಲೋಕವೊಂದನ್ನು ಸೃಷ್ಟಿಸುತ್ತದೆ. ಕ್ರಿಕೆಟ್ ಅಮೆರಿಕಕ್ಕೂ ವಿಸ್ತರಣೆಯಾಗುತ್ತಿದ್ದು, ಈ ಬೆಳವಣಿಗೆಯ ಭಾಗವಾಗಲು ನಾನು ರೋಮಾಂಚಿತನಾಗಿದ್ದೇನೆ. ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯ ನ್ಯೂಯಾರ್ಕ್‍ನಲ್ಲಿ ನಡೆಯುತ್ತಿರುವುದು ಈ ವರ್ಷದ ಅತ್ಯಂತ ದೊಡ್ಡ ಕ್ರೀಡಾ ಪಂದ್ಯಗಳ ಪೈಕಿ ಒಂದಾಗಿದೆ. ಹಾಗಾಗಿ, ನ್ಯೂಯಾರ್ಕ್‍ನ ನೂತನ ಸ್ಟೇಡಿಯಮ್‍ನಲ್ಲಿ ವಿಶ್ವದ ಶ್ರೇಷ್ಠ ಆಟಗಾರರು ಆಡುವುದನ್ನು ನೋಡುವುದು ಮತ್ತು ಆ ಪಂದ್ಯದ ಭಾಗವಾಗುವುದು ನನ್ನ ಅದೃಷ್ಟವಾಗಿದೆ’’ ಎಂದು ಅವರು ಹೇಳಿದರು.

ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಪಂದ್ಯವು ಜೂನ್ 9ರಂದು ನಡೆಯಲಿದೆ.

ಪಂದ್ಯಾವಳಿಯು ಜೂನ್ ಒಂದರಿಂದ 29ರವರೆಗೆ ನಡೆಯಲಿದೆ. ಅಮೆರಿಕದ ಟೆಕ್ಸಾಸ್‍ನ ಗ್ರಾಂಡ್ ಪ್ರಯರೀ ಸ್ಟೇಡಿಯಮ್‍ನಲ್ಲಿ ನಡೆಯಲಿರುವ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಸಹ ಆತಿಥೇಯ ಅಮೆರಿಕವು ಕೆನಡವನ್ನು ಎದುರಿಸಲಿದೆ.

ಪಂದ್ಯಾವಳಿಯ ಆತಿಥ್ಯವನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ವಹಿಸಲಿವೆ. ಪಂದ್ಯಾವಳಿಯು 9 ಮೈದಾನಗಳಲ್ಲಿ ನಡೆಯಲಿದ್ದು, 20 ತಂಡಗಳು ಭಾಗವಹಿಸಲಿವೆ. ಫೈನಲ್ ಪಂದ್ಯವು ಬಾರ್ಬಡೋಸ್‍ನಲ್ಲಿ ಜೂನ್ 29ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News