ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದೀರಿ: ಅರಣ್ಯಾಧಿಕಾರಿಗಳಿಗೆ ಕೆಡಿಪಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ತರಾಟೆ

Update: 2023-11-08 17:09 GMT

ಶಿವಮೊಗ್ಗ, ನ.8:ಶಿವಮೊಗ್ಗ ತಾಲೂಕಿನಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು,ರೈತರಿಂದ ಸಾಕಷ್ಟು ದೂರುಗಳು ಬರುತ್ತಿವೆ.ಅರಣ್ಯ ಇಲಾಖೆ ಅಧಿಕಾರಿಗಳು ಶೀಘ್ರದಲ್ಲೇ ಆನೆ ಹಾವಳಿ ತಡೆಯಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲಾಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಸೂಚನೆ ನೀಡಿದರು.

ನಗರದ ಜಿಲ್ಲಾ ಪಂಚಾಯತ್‌ನ ಅಬ್ದುಲ್ ನಝೀರ್ ಸಾಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತೈಮಾಸಿಕ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬರಗಾಲವಿದೆ.ಮಳೆಯಿಲ್ಲದೇ ರೈತರು ಉಳುಮೆ ಮಾಡಿದ ಬೆಳೆ ನಷ್ಟವಾಗಿದೆ.ಅಳಿದು-ಉಳಿದ ಬೆಳೆಗಳನ್ನು ರಾತ್ರಿ ವೇಳೆ ಆನೆಗಳು ತಿಂದುಕೊಂಡು ಹೋದರೆ ರೈತರು ಏನು ಮಾಡಬೇಕು ಎಂದು ಅರಣ್ಯಾಧಿಕಾರಿಗಳನ್ನು ಪ್ರಶ್ನಿಸಿದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್‍ಯನಾಯ್ಕ್ ಮಾತನಾಡಿ,ಶಿವಮೊಗ್ಗ ತಾಲೂಕಿನ ಮಲೆಶಂಕರ,ಶೆಟ್ಟಿಹಳ್ಳಿ.ಪುರದಾಳು ಭಾಗಕ್ಕೆ ಹೊಂದಿಕೊಂಡ ಗ್ರಾಮಗಳಲ್ಲಿ ಆನೆ ಹಾವಳಿ ಮಿತಿ ಮೀರಿದೆ.ಮೆಕ್ಕೆಜೋಳ,ಅಡಿಕೆ ತೋಟಗಳನ್ನು ನಾಶ ಮಾಡಿವೆ.ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ತಿಳಿಸಿದರೂ ಪೂರಕವಾಗಿ ಸ್ಪಂದನೆ ಮಾಡುತ್ತಿಲ್ಲ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಸಚಿವ ಮಧುಬಂಗಾರಪ್ಪ ಪ್ರತಿಕ್ರಿಯಿಸಿ, ಆನೆ ದಾಳಿಯಿಂದ ಮಾನವ ಪ್ರಾಣಹಾನಿ ಸಂಭವಿಸಿದರೆ ಯಾರು ಹೊಣೆ ಎಂದು ಅರಣ್ಯಾಧಿಕಾರಿಗಳಿಗೆ ಪ್ರಶ್ನಿಸಿದರು.ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ವರ್ತನೆ ಬದಲಿಸಿಕೊಳ್ಳಬೇಕು.ರಾಜ್ಯ ಸರ್ಕಾರವೇ ನಮ್ಮ ಕೈಯಲ್ಲಿದೆ ಎಂದು ಅರಣ್ಯಾಧಿಕಾರಿಗಳು ಸರ್ವಾಧಿಕಾರಿ ರೀತಿ ವರ್ತಿಸುತ್ತಿದ್ದೀರಿ.ಇದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

10 ರಿಂದ 15 ದಿನದಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು.ಆನೆಗಳನ್ನು ಈ ಭಾಗದಿಂದ ಭದ್ರಾ ಕಡೆ ಕಳುಹಿಸುವ ಕೆಲಸ ಆಗಬೇಕು.ಅಲ್ಲದೇ ಆನೆ ಹಾವಳಿಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಬೆಳೆನಷ್ಟ ಪರಿಹಾರವನ್ನು ಒದಗಿಸಬೇಕು ಎಂದು ಸೂಚನೆ ನೀಡಿದರು.

ಬಿಜೆಪಿ ಶಾಸಕ ಎಸ್.ಎನ್ ಚನ್ನಬಸಪ್ಪ ಮಾತನಾಡಿ,ಬರ ಪರಿಸ್ಥಿತಿ ಎದುರಾಗಿ ಎಷ್ಟು ತಿಂಗಳಾಯಿತು ಪರಿಹಾರ ಕಾರ್ಯಕ್ಕೆ ಸರ್ಕಾರ ಏನು ಮಾಡಿದೆ ಎಂದು ಪ್ರಶ್ನಿಸಿದರು.

ಕಳೆದ ಆಗಸ್ಟ್‌ನಲ್ಲೇ ಬರ ಎಂದು ತಿಳಿದು ಬಂದರೂ ಈವರೆಗೆ ಪರಿಹಾರದ ಬಗ್ಗೆ ಒಂದೂ ಕ್ರಮ ಇಲ್ಲ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.

ಬರ ಪರಿಸ್ಥಿತಿ ಎದುರಿಸಲು ಸಾಧ್ಯವಾಗದೆ ಅನೇಕ ರೈತರು ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬರ ನಿಬಾಯಿಸಲು ಸರ್ಕಾರಕ್ಕೆ ಆಸಕ್ತಿ ಇಲ್ಲವೇ ಎಂದರು.

ಇದಕ್ಕೆ ಧ್ವನಿ ಗೂಡಿಸಿದ ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಕಳೆದ ಸೆ.14ಕ್ಕೆ ಬರಪೀಡಿತ ಜಿಲ್ಲೆಗಳ ಘೋಷಣೆಯನ್ನು ಸರ್ಕಾರ ಮಾಡಿದೆ, ಆದರೆ ಈವರೆಗೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ಸರಿಯಲ್ಲ. ಅಲ್ಲದೇ ಎನ್‌ಡಿಆರ್ ಎಫ್ ಹಾಗೂ ಎಸ್‌ಡಿಆರ್‌ಎಫ್ ಮೂಲಕ ಪರಿಹಾರ ನೀಡಲು ಅವಕಾಶವಿದ್ದು ಇದರ ಬಗ್ಗೆಯೂ ಯೋಚಿಸಿಲ್ಲ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸಹ ರೈತರ ಪರವಾಗಿ ಸರ್ಕಾರ ನಿಲ್ಲಬೇಕು, ಹಿಂದೆಲ್ಲ ಕೇಂದ್ರದ ಪರಿಹಾರ ಹಣಕ್ಕೆ ಸಮನಾಗಿ ರಾಜ್ಯ ಸರ್ಕಾರ ಹಣ ನೀಡುತ್ತಿತ್ತು, ಆದರೆ ಈ ವರ್ಷ ರಾಜ್ಯ ಸರ್ಕಾರ ಕಡಿಮೆ ಹಣ ನೀಡಿದೆ. ಇದರಿಂದ ಪರಿಹಾರ ವಿತರಣೆಗೆ ತೊಂದರೆಯಾಗ ಲಿದ್ದು, ಈ ಬಗ್ಗೆ ತಕ್ಷಣ ಮುಖ್ಯಮಂತ್ರಿ ಗಳೊಂದಿಗೆ ಮಾತನಾಡಿ ಸರಿ ಮಾಡಬೇಕೆಂದು ಕೋರಿದರು.

ಇದಕ್ಕೆ ಉತ್ತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳು ನ.14ರೊಳಗೆ ಹಾನಿಯ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ. ಎಲ್ಲಾ ಜಿಲ್ಲೆಗಳು ವರದಿ ನೀಡಿದ ನಂತರ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹಣ ಬಿಡುಗಡೆ ಮಾಡುತ್ತಾರೆ ಎಂದರು.

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಅನಾವೃಷ್ಠಿ ಯಿಂದಾಗಿ 80.70 ಕೋಟಿರೂ. ಪರಿಹಾರದ ಅಗತ್ಯವಿದೆ ಎಂದು ಪ್ರಸ್ತಾವನೆ ಸಿದ್ದ ಪಡಿಸಲಾಗಿದೆ. ಅಲ್ಲದೇ ಬೆಳೆ ವಿಮೆ ಮಾಡಿಸಿದ್ದರಲ್ಲಿ ರಾಜ್ಯದಲ್ಲೇ ಶಿವಮೊಗ್ಗ ಜಿಲ್ಲೆ ಪ್ರಥಮ ಎಂದು ಸಭೆಗೆ ಮಾಹಿತಿ ನೀಡಿದರು.

ವಿದ್ಯುತ್: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಗೆ ಸರ್ಕಾರ ಹೊಸ ನಿಯಮ ಮಾಡಿದ್ದು, ಟಿ.ಸಿ. 500 ಮೀಟರ್‌ಗಿಂತ ದೂರವಿದ್ದಲ್ಲಿ ಅಂತವರು ಸೋಲಾರ್ ವ್ಯವಸ್ಥೆ ಮಾಡಿಕೊಳ್ಳಲು ತಿಳಿಸಲಾಗಿದೆ. ಇದಕ್ಕೆ ಸಬ್ಸಿಡಿ ಇದ್ದರೂ ರೈತರು ತಕ್ಷಣ ಸುಮಾರು 1ಲಕ್ಷ ಭರಿಸಬೇಕು, ಹಿಂದಾದರೆ 1 ಟಿ.ಸಿಗೆ 20 ಸಾವಿರ ಕಟ್ಟಿದರೇ ಸಾಕು ಹಲವು ರೈತರಿಗೆ ಅನು ಕೂಲವಾಗುತ್ತಿತ್ತು. ಆದ್ದರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಯೋಜನೆ ಜಾರಿ ಮಾಡಬೇಕು ಎಂದರು.

ಸಭೆಯಲ್ಲಿ ಶಾಸಕರಾದ ಶಾರದಾ ಪೂರ್‍ಯನಾಯ್ಕ, ಎಸ್. ರುದ್ರೇಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಎಂ. ಮತ್ತಿತರರಿದ್ದರು

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News