ನಟ ದರ್ಶನ್‍ಗೆ ಕಾರಾಗೃಹದಲ್ಲಿ ರಾಜಾತಿಥ್ಯ? : ರೌಡಿಶೀಟರ್ ಜೊತೆ ಸಿಗರೇಟ್ ಸೇದುವ ಫೋಟೋ ವೈರಲ್!

Update: 2024-08-25 15:28 GMT

PC : x/@kavashivani

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಗರೇಟ್ ಸೇದುತ್ತಿರುವ ಫೊಟೊವೊಂದು ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್‍ಗೆ ಜೈಲಿನೊಳಗೆ ರಾಜಾತಿಥ್ಯ ದೊರೆಯುತ್ತಿರುವ ಅನುಮಾನಗಳು ವ್ಯಕ್ತವಾಗಿವೆ.

ಪರಪ್ಪನ ಅಗ್ರಹಾರ ಕಾರಾಗೃಹದ ವಿಡಿಯೋ ಕಾನ್ಫರೆನ್ಸ್ ಹಾಲ್‍ನ ಹಿಂಭಾಗದ ಸ್ಥಳದಲ್ಲಿ ಬೆಂಗಳೂರಿನ ರೌಡಿಶೀಟರ್ ವಿಲ್ಸನ್‍ಗಾರ್ಡನ್ ನಾಗ ಎಂಬುವನ ಜೊತೆಗೆ ಕುಳಿತುಕೊಂಡು ನಟ ದರ್ಶನ್ ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ.

ಪ್ಲಾಸ್ಟಿಕ್ ಕುರ್ಚಿಯಲ್ಲಿ ಕುಳಿತುಕೊಂಡಿರುವ ದರ್ಶನ್, ಒಂದು ಕೈನಲ್ಲಿ ಟೀ ಕಪ್ ಮತ್ತು ಇನ್ನೊಂದು ಕೈನಲ್ಲಿ ಸಿಗರೇಟ್ ಹಿಡಿದುಕೊಂಡಿದ್ದು, ಜೊತೆಗೆ ದರ್ಶನ್ ಆಪ್ತ ನಾಗರಾಜ್, ಮತ್ತೋರ್ವ ಇದ್ದಾರೆ. . ಅದೇ ಬ್ಯಾರಕ್‍ನಲ್ಲಿರುವ ಮತ್ತೊಬ್ಬ ಖೈದಿಯು ಈ ಫೋಟೋವನ್ನು ತೆಗೆದು ತನ್ನ ಹೆಂಡತಿಗೆ ಕಳುಹಿಸಿರುವ ಶಂಕೆ ವ್ಯಕ್ತವಾಗಿದೆ.

13 ವರ್ಷಗಳ ಬಳಿಕ ಮತ್ತೆ ಜೈಲು ಸೇರಿರುವ ನಟ ದರ್ಶನ್‍ಗೆ ಆತಿಥ್ಯ ನೀಡಲು ರೌಡಿಶೀಟರ್ ಮುಂದಾಗಿದ್ದು, ದರ್ಶನ್‍ಗೆ ಜೈಲಿನಲ್ಲಿ ಅನುಕೂಲಕರ ವ್ಯವಸ್ಥೆಯಿದೆ. ಇದಕ್ಕೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸಾಥ್ ನೀಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

‘ಜೈಲಿನ ಊಟ ಸರಿ ಇಲ್ಲ, ಮನೆಯೂಟ ಬೇಕು’ ಎಂದು ನಟ ದರ್ಶನ್ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ. ಅವರಿಗೆ ಮನೆಯೂಟ ಇನ್ನೂ ಸಿಕ್ಕಿಲ್ಲ. ಆದರೆ, ಈ ಫೋಟೋದಲ್ಲಿ ಅವರು ಐಷಾರಾಮಿ ಆಗಿ ಕಾಲ ಕಳೆಯುತ್ತಿರುವುದನ್ನು ನೋಡಿದರೆ, ಅವರಿಗೆ ಅಲ್ಲಿ ಸಕಲ ವ್ಯವಸ್ಥೆಗಳು ಸಿಗುತ್ತಿವೆಯೇ ಎಂಬ ಅನುಮಾನಗಳು ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಸಿಸಿಬಿ ತಪಾಸಣೆ ಬಳಿಕ ಫೋಟೋ ವೈರಲ್?: ಜೈಲಿನಲ್ಲಿ ಮೊಬೈಲ್ ಬಳಕೆ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಶಂಕೆ ಹಿನ್ನೆಲೆಯಲ್ಲಿ ಆ.24ರಂದು ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ಖೈದಿಗಳ ಬ್ಯಾರಕ್‍ಗಳಲ್ಲಿ ತಪಾಸಣೆ ನಡೆಸಿದ್ದರು. ನಟ ದರ್ಶನ್, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಹಲವು ಪ್ರಮುಖರ ಬ್ಯಾರಕ್‍ಗಳನ್ನು ಶೋಧಿಸಲಾಗಿತ್ತು. ಬಳಿಕ ಜೈಲಿನಲ್ಲಿ ಮೊಬೈಲ್ ಸೇರಿದಂತೆ ಯಾವುದೇ ಅನಧಿಕೃತ ವಸ್ತುಗಳು ದೊರೆತಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದರು. ಇದರ ಬೆನ್ನಲ್ಲೇ ದರ್ಶನ್ ಅವರ ಈ ಫೊಟೋ ವೈರಲ್ ಆಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಪರಪ್ಪನ ಅಗ್ರಹಾರ ಸೆರೆಮನೆಯೇ? ಅರಮನೆಯೇ?:

ಪರಪ್ಪನ ಅಗ್ರಹಾರ ಸೆರೆಮನೆಯೇ ಅಥವಾ ಅರಮನೆಯೇ ಎಂಬುದನ್ನು ಗೃಹ ಇಲಾಖೆ ಮತ್ತು ಗೃಹ ಸಚಿವರು ನಾಡಿನ ಜನತೆಗೆ ಸ್ಪಷ್ಟಪಡಿಸಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಆಗ್ರಹಿಸಿದ್ದಾರೆ.

ರವಿವಾರ ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಲೆ ಪ್ರಕರಣದ ಆರೋಪಿ ದರ್ಶನ್‍ಗೆ ಜೈಲಿನಲ್ಲಿ ಐಷಾರಾಮಿ, ರಾಜಾತಿಥ್ಯ ವ್ಯವಸ್ಥೆಯನ್ನು ಅಲ್ಲಿನ ಜೈಲಿನ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಲ್ಪಿಸಿಕೊಟ್ಟಿರುವುದು ತೀವ್ರ ಖಂಡನೀಯ, ಇದು ರಾಜ್ಯ ಸರಕಾರದ ದುರಾಡಳಿತದ ಪರಮಾವಧಿ ಎಂದು ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News