ನಮ್ಮ ಹಿಂದೆ ಓಡಾಡಿದವರೆಲ್ಲಾ ಮಂತ್ರಿಯಾಗಿದ್ದಾರೆ : ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ
ಕೊಪ್ಪಳ: ʼʼನಮ್ಮ ಹಿಂದೆ ಓಡಾಡಿದವರೆಲ್ಲ ಮಂತ್ರಿಯಾಗಿದ್ದಾರೆ. ಅವರಪ್ಪಂದಿರ ಜೊತೆ ನಾನು ಕೆಲಸ ಮಾಡಿದವನು. ಇವರು ನಮ್ಮ ಮುಂದೆ ಧಿಮಾಕು ತೋರಿಸಿಕೊಂಡು ಓಡಾಡುತ್ತಾರೆʼʼ ಎಂದು ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಯಲಬುರ್ಗಾ ತಾಲೂಕಿನ ತಳಕಲ್ ಗ್ರಾಮದಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕರ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ವೇದಿಕೆಯಲ್ಲಿ ಮುಖಂಡರೊಬ್ಬರು ನೀವು ಮಂತ್ರಿ ಆಗೋದು ಯಾವಾಗ ಎಂದು ಪ್ರಶ್ನೆ ಮಾಡಿದಾಗ, ʼನೀವು(ಕಾರ್ಯಕರ್ತ) ದುಖಃ ಪಡೋ ಅಗತ್ಯವಿಲ್ಲ. ಒಮ್ಮೊಮ್ಮೆ ಮಂತ್ರಿ ಆಗೋದಕ್ಕೆ ಆಗುವುದಿಲ್ಲ. ಅದಕ್ಕೆ ಹಣೆ ಬರಹ ಬೇಕುʼ ಎಂದು ಹೇಳಿದ್ದಾರೆ.
ʼʼನನ್ನ ಹಿಂದೆ ಓಡಾಡಿದವರೆಲ್ಲಾ ಮಂತ್ರಿ ಆಗಿದ್ದಾರೆ. ಅವರ ಅಪ್ಪಂದಿರ ಜತೆ ನಾನು ಕೆಲಸ ಮಾಡಿದವನು. ಇವರು, ಈಗ ನಮ್ಮ ಮುಂದೆ ಧಿಮಾಕು ಮಾಡ್ಕೊಂಡು ಓಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ತಂದೆ ಜೊತೆ ಕೆಲಸ ಮಾಡಿದ್ದೇನೆ, ದೇವೆಗೌಡರ ಕ್ಯಾಬಿನೆಟ್‌ನಲ್ಲಿ ನಾನು ಮಿನಿಸ್ಟರ್ ಆಗಿದ್ದವನು. ಈ ಕುಮಾರಸ್ವಾಮಿ ನನ್ನ ಪಕ್ಕ ನಿಲ್ಲೋದಕ್ಕೂ ಹೆದರುತ್ತಿದ್ದ. ಏನ್ ಮಾಡೊದು ಅವನ ಹಣೆ ಬರಹದಲ್ಲಿ ಬರೆದಿತ್ತು. ಮುಖ್ಯಮಂತ್ರಿ ಆಗಿಬಿಟ್ಟʼʼ ಎಂದು ಹೇಳಿದ್ದಾರೆ.
ʼನಮ್ಮ ಸಿದ್ದರಾಮಯ್ಯ ಅವರನ್ನು ನೋಡಿ, ಕಾಂಗ್ರೆಸ್ಗೆ ಬಂದು ಎರಡು ಬಾರಿ ಮುಖ್ಯಮಂತ್ರಿ ಆದರು. ಕಾಂಗ್ರೆಸ್ನ ಹಳೇ ಮಂದಿ ಈಗ ಏನು ಹೇಳುತ್ತಿರಬಹುದು? ಇವೆಲ್ಲಾ ಮನುಷ್ಯನ ಅದೃಷ್ಟ. ಪಾಪ ಎಲ್ ಕೆ ಅಡ್ವಾಣಿ ಅವರು ಬಿಜೆಪಿ ಕಟ್ಟಿಕಟ್ಟಿದರು. ಆದರೆ ನರೇಂದ್ರ ಮೋದಿ ಬಂದು ಪ್ರಧಾನಿಯಾದರುʼ ಎಂದು ಬಸವರಾಜ ರಾಯರೆಡ್ಡಿ ಟೀಕಿಸಿದರು.