ಬಿಜೆಪಿಯಿಂದ ಕಾಂಗ್ರೆಸ್ ಪಕ್ಷದವರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುವ ಯತ್ನ: ಸಂತೋಷ್ ಲಾಡ್
Update: 2024-01-15 12:29 GMT
ಹುಬ್ಬಳ್ಳಿ: ಬಿಜೆಪಿ ಮುಖಂಡರು ಕಾಂಗ್ರೆಸ್ ಪಕ್ಷದವರನ್ನು ಹಿಂದೂ ವಿರೋಧಿಗಳೆಂದು ಬಿಂಬಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ಅಧಿಕಾರದ ಗದ್ದುಗೆ ಏರಬೇಕೆಂಬ ಉದ್ದೇಶದಿಂದ ಬಿಜೆಪಿ ಮುಖಂಡರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ರಾಮಮಂದಿರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಭಿಪ್ರಾಯ ಹೇಳಿದ್ದಾರೆ. ಹಾಗೆ ಹೇಳಬಾರದೆಂಬ ಯಾವುದೇ ನಿಯಮವಿಲ್ಲ. ಬಿಜೆಪಿಯವರಿಗೆ ಮಂದಿರ, ಚುನಾವಣೆ ಮುಗಿಯುವವರೆಗೆ ಅಷ್ಟೇ ನೆನಪಾಗುತ್ತದೆ. ಈಗಾಗಲೇ ಶಂಕರಾಚಾರ್ಯರು ಬಹಿಷ್ಕಾರ ಮಾಡಿದ್ದಾರೆ. ಅವರನ್ನು ಮೀರಿ ಬಿಜೆಪಿಯವರು ಇದ್ದಾರೆಯೇ?’ ಎಂದು ಸಂತೋಷ್ ಲಾಡ್ ಪ್ರಶ್ನಿಸಿದರು.