ಭದ್ರಾವತಿ: ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಬಿಜೆಪಿ ಕಾರ್ಯಕರ್ತನಿಗೆ ಹಲ್ಲೆ
ಶಿವಮೊಗ್ಗ, ಡಿ.11: ಸ್ಥಳೀಯ ಶಾಸಕರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಆರೋಪದಲ್ಲಿ ಬಿಜೆಪಿ ಕಾರ್ಯಕರ್ತನೋರ್ವನ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ಭದ್ರಾವತಿಯಲ್ಲಿ ನಡೆದಿದೆ.
ಭದ್ರಾವತಿಯ ಸಿದ್ದಾಪುರದ ವಿಶ್ವೇಶ್ವರಯ್ಯ ಲೇಔಟ್ ನಿವಾಸಿ, ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತ ಗೋಕುಲ್ ಹಲ್ಲೆಗೊಳಗಾದವರು.
"ಭದ್ರಾವತಿಯಲ್ಲಿ ಇಸ್ಪಿಟ್ ಹಾವಳಿ ಹೆಚ್ಚಾಗಿದೆ. ಗೆಲ್ಲುವ ಮುಂಚೆ ಯುವಕರಿಗೆ ಉದ್ಯೋಗ ಕೊಡಿಸುತ್ತೇನೆ, ಎಂಪಿಎಂ ಪ್ರಾರಂಭಿಸುತ್ತೇನೆ ಎಂದ ಶಾಸಕರೇ ಈಗ ಯಾಕೆ ಇಸ್ಪಿಟ್ ಹಾವಳಿ ತಡೆಗಟ್ಟುತ್ತಿಲ್ಲ" ಎಂದು ಭದ್ರಾವತಿ ಶಾಸಕ ಸಂಗಮೇಶ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಗೋಕುಲ್ ಪ್ರಶ್ನಿಸಿ ಪೋಸ್ಟ್ ಮಾಡಿದ್ದರು.
ಶಾಸಕರ ವಿರುದ್ಧ ಪೋಸ್ಟ್ ಮಾಡಿರುವುದನ್ನು ಆಕ್ಷೇಪಿಸಿ, ಬೈಕಿನಲ್ಲಿ ಬಂದಿದ್ದ ಮುಸುಕುಧಾರಿಗಳು ರವಿವಾರ ಬೆಳಗ್ಗೆ ಗೋಕುಲ್ ಕಾರಿನ ಮೇಲೆ ದಾಳಿ ನಡೆಸಿ ಕಾರಿನ ಗಾಜಿಗೆ ಹಾನಿಯುಂಟು ಮಾಡಿದ್ದರು. ರಾತ್ರಿ ಕಿಡಿಗೇಡಿಗಳು ಗೋಕುಲ್ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅವರ ತಲೆ ಹಾಗೂ ಕಿವಿಗೆ ಗಾಯವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಗಣೇಶ್, ಹರ್ಷ ಹಾಗೂ ನಂಜೇಗೌಡ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.