ಪ್ರಜ್ವಲ್‌ನನ್ನು ವಿದೇಶಕ್ಕೆ ಕಳಿಸುವ ಸಂಚನ್ನು ಮಾಡಿದ್ದೇ ಬಿಜೆಪಿ : ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು : ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಕಳಿಸುವ ಸಂಚನ್ನು ಮಾಡಿದ್ದೇ ಬಿಜೆಪಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೃತ್ಯ ಮಾಡಿದವನು ಎಲ್ಲಿದ್ದಾನೆ ಎನ್ನುವ ಚರ್ಚೆಯ ಬದಲು, ವಿಡಿಯೊ ಹರಿಬಿಟ್ಟವರು ಯಾರೋ ಎನ್ನುವ ಚರ್ಚೆ ಹೆಚ್ಚಾಗಿದೆ. ಅದರಲ್ಲೂ. ಬೇಡದ ವಿಚಾರ ಮಾತ್ರ ಜೆಡಿಎಸ್ ನಾಯಕರು ಚರ್ಚೆ ಮಾಡುತ್ತಿದ್ದಾರೆ" ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಪ್ರಜ್ವಲ್‍ಗೆ ಟಿಕೆಟ್ ಕೊಡಬಾರದೆಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ ಎನ್ನುವ ಮಾಹಿತಿ ಗೊತ್ತಾಗಿದೆ. ಹೀಗಾಗಿಯೇ, ವಿದೇಶಕ್ಕೆ ಕಳಿಸುವ ಸಂಚನ್ನು ಬಿಜೆಪಿಯವರೇ ಮಾಡಿರುವುದು. ಎಫ್‍ಐಆರ್ ಆಗುವ ಮೊದಲೇ ವಿದೇಶಕ್ಕೆ ಕಳಿಸಿ ಬಿಜೆಪಿ ಸಂಚು ಮಾಡಿದ್ದಾರೆ. ದೇವರಾಜೇಗೌಡ ಸ್ಪಷ್ಟವಾಗಿ ಹೇಳಿದ್ದು, ಈ ಎಲ್ಲ ಮಾಹಿತಿ ಬಿಜೆಪಿಯವರಿಗೆ ಗೊತ್ತಿತ್ತು" ಎಂದು ಹೇಳಿದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹಾದ್ ಜೋಶಿ ಜಾಣ ಕುರುಡರ ರೀತಿ ಮಾತನಾಡುತ್ತಿದ್ದಾರೆ. ಇಷ್ಟು ದಿನ ಅವರೂ ಕತ್ತೆ ಕಾಯುತ್ತಾ ಇದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಜೋಶಿಯವರಿಗೆ ಕಾನೂನು ಅರಿವು ಇಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.