ಹುತಾತ್ಮ ಯೋಧ ಪ್ರಾಂಜಲ್‌ ಕುರಿತ ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿದ ತೇಜಸ್ವಿ ಸೂರ್ಯ; ಕ್ಷಮೆಯಾಚನೆಗೆ ಸಿಎಂ ಆಗ್ರಹ

Update: 2023-12-05 12:22 GMT

ಸಿದ್ದರಾಮಯ್ಯ /  ತೇಜಸ್ವಿ ಸೂರ್ಯ

ಬೆಂಗಳೂರು: ಸಂಸದ ತೇಜಸ್ವಿ ಸೂರ್ಯ ಅವರು ಹುತಾತ್ಮ ಯೋಧ ಪ್ರಾಂಜಲ್ ಅವರ ಕುರಿತ ತನ್ನ ಹೇಳಿಕೆಯನ್ನು ಉದ್ದೇಶಪೂರ್ವಕವಾಗಿ ತಿರುಚಿ ತಪ್ಪು ಅರ್ಥ ಬರುವಂತೆ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆ.

“ಗದ್ದಲದ ಕಾರಣದಿಂದಾಗಿ ವರದಿಗಾರರ ಪ್ರಶ್ನೆ ಪ್ರಾರಂಭದಲ್ಲಿ ಸರಿಯಾಗಿ ಕೇಳಿರಲಿಲ್ಲ. ಪತ್ರಕರ್ತರ ಪ್ರಶ್ನೆ ಹುತಾತ್ಮರಾದ ವೀರಯೋಧ ಪ್ರಾಂಜಲ್ ಅವರ ಕುರಿತಾಗಿರುವುದು ಎಂದು ಗೊತ್ತಾದ ನಂತರ ರಾಜ್ಯ ಸರ್ಕಾರ ಪರಿಹಾರ ನೀಡಲು ಬದ್ಧವಾಗಿರುವುದನ್ನು ತಿಳಿಸಿದ್ದು ಮಾತ್ರವಲ್ಲ, ಬೇರೆ ಯಾವ ರಾಜ್ಯದಲ್ಲಿಯಾದರೂ ಹುತಾತ್ಮ ಯೋಧರಿಗೆ ಒಂದು ಕೋಟಿ ರೂಪಾಯಿ ಪರಿಹಾರ ನೀಡಿರುವುದು ಗೊತ್ತಾದರೆ ಅಷ್ಟೇ ಮೊತ್ತವನ್ನು ನೀಡಲು ಸಿದ್ಧ ಎಂದೂ ತಿಳಿಸಿದ್ದೇನೆ. ಇಂದು ನಮ್ಮ ಅಧಿಕಾರಿಗಳು ಪರಿಹಾರದ ಚೆಕ್ ಅನ್ನು ಹುತಾತ್ಮ ಪ್ರಾಂಜಲ ಅವರ ಕುಟುಂಬಕ್ಕೆ ನೀಡಿದ್ದಾರೆ. ತೇಜಸ್ವಿ ಸೂರ್ಯ ಎಂಬ ಬಿಜೆಪಿ ಸಂಸದ, ತಪ್ಪು ಅರ್ಥ ಬರುವಂತೆ ನನ್ನ ಹೇಳಿಕೆಯನ್ನು ತುಂಡರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟು ವಿಕೃತಿ ಮೆರೆದಿರುವುದು ನನ್ನ ಗಮನಕ್ಕೆ ಬಂದಿದೆ” ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯ ದುರುದ್ದೇಶದಿಂದ ಈ ವಿಡಿಯೋವನ್ನು ತಿರುಚಿ ಹಂಚಿಕೊಂಡಿರುವ ಅವರು ಹುತಾತ್ಮ ಪ್ರಾಂಜಲ್ ಮತ್ತು ಅವರ ಕುಟುಂಬ ವರ್ಗಕ್ಕೆ ಮಾತ್ರವಲ್ಲ ಸಮಸ್ತ ಯೋಧ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿ ಕಾರಿದ ಸಿದ್ದರಾಮಯ್ಯ ಅವರು, ಪತ್ರಕರ್ತರ ಮುಂದೆ ಅವರು ನೀಡಿರುವ ಹೇಳಿಕೆಯ ಪೂರ್ಣ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೆ, ತಪ್ಪನ್ನು ಒಪ್ಪಿಕೊಂಡು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ದೇಶ, ದೇವರು, ಸೈನಿಕರು ಎಲ್ಲವೂ ಭಾರತೀಯ ಜನತಾ ಪಕ್ಷಕ್ಕೆ ರಾಜಕೀಯ ವ್ಯಾಪಾರದ ಸರಕುಗಳು ಮಾತ್ರ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಹುತಾತ್ಮ ಪ್ರಾಂಜಲ್ ಅವರ ಮೃತದೇಹವನ್ನು ಇಲ್ಲಿಗೆ ತಂದಿದ್ದ ದಿನ ಪ್ರಧಾನಿ ನರೇಂದ್ರಮೋದಿ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಅಂತಿಮ ದರ್ಶನ ಮಾಡಿ ಹೆತ್ತವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದನ್ನು ನಾವು ವಿವಾದ ಮಾಡಲು ಹೋಗಲಿಲ್ಲ. ಆದರೆ, ಬಿಜೆಪಿ ಸಂಸದ ಒಬ್ಬ ವೀರ ಯೋಧನ ಬಲಿದಾನವನ್ನು ಕೂಡಾ ತನ್ನ ಸುಳ್ಳು ಸುದ್ದಿಯ ಫ್ಯಾಕ್ಟರಿಗೆ ಸರಕಾಗಿ ಮಾಡಿ ನನ್ನ ಮಾನ ಹಾನಿಗೆ ಪ್ರಯತ್ನಿಸಿರುವುದು ಅಕ್ಷಮ್ಯ. ಇಂತಹ ಸುಳ್ಳುಕೋರರು ನಮ್ಮ ನಾಡಿಗೆ ಕಳಂಕ. ಇವರಿಗೆ ರಾಜ್ಯದ ಜನರೇ ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಮೂಲಕ ಪ್ರತಿಕ್ರಿಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News