ಉತ್ತರ ಪ್ರದೇಶ: ರೈಲ್ವೆ ನಿಲ್ದಾಣದಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ ರೈಲ್ವೆ ಪೊಲೀಸ್ ಪೇದೆ ಅಮಾನತು
ಲಕ್ನೋ: ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಬೆಲ್ತಾರಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ದಳದ ಪೊಲೀಸ್ ಪೇದೆಯು ಬಾಲಕನೊಬ್ಬನಿಗೆ ಒದೆಯುತ್ತಿರುವ ವಿಡಿಯೊ ರವಿವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರ ಬೆನ್ನಿಗೇ ಸದರಿ ಪೊಲೀಸ್ ಪೇದೆಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು deccanherald.com ವರದಿ ಮಾಡಿದೆ.
ಆರೋಪಿ ಪೊಲೀಸ್ ಪೇದೆಯನ್ನು ಈಶಾನ್ಯ ರೈಲ್ವೆಯ ವಾರಾಣಸಿ ವಿಭಾಗದ ಬಲಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಈಶಾನ್ಯ ರೈಲ್ವೆಯು, "ಘಟನೆಯ ಕುರಿತು ಅಝಂಗಢ ರೈಲ್ವೆ ರಕ್ಷಣಾ ದಳದ ಇನ್ಸ್‌ಪೆಕ್ಟರ್‌ಗಳಿಂದ ತನಿಖೆ ನಡೆಸಲಿದ್ದು, ಈ ನಡುವೆ ಆರೋಪಿ ಪೇದೆಯನ್ನು ಅಮಾನತುಗೊಳಿಸಲಾಗಿದೆ" ಎಂದು ತಿಳಿಸಿದೆ.
"ಈ ಘಟನೆ ಎಂದು ಜರುಗಿದೆ ಎಂಬ ಕುರಿತು ಈವರೆಗೆ ದೃಢಪಟ್ಟಿಲ್ಲವಾದರೂ, ಈ ಸಂಬಂಧ ತನಿಖೆ ಪ್ರಗತಿಯಲ್ಲಿದೆ" ಎಂದು ಈಶಾನ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಅಶೋಕ್ ಕುಮಾರ್ ಹೇಳಿದ್ದಾರೆ.
ಪೇದೆಯು ಒದ್ದಾಗ ಬಾಲಕನು ರೈಲ್ವೆ ಫ್ಲಾಟ್ ಫಾರಂನಲ್ಲಿ ನಿದ್ರಿಸುತ್ತಿದ್ದ ಎಂದು ವರದಿಯಾಗಿದೆ.