ಸಿಎಂ ಕಚೇರಿಯಲ್ಲಿ ಹಣಕ್ಕೆ ಬೇಡಿಕೆ: ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ
ಬೆಂಗಳೂರು: ''ಶಾಸಕರು ಶಿಫಾರಸ್ಸು ತಂದರೆ ಸಾಲದು 30 ಲಕ್ಷ ದುಡ್ಡು ತನ್ನಿ ಎಂದು ಮುಖ್ಯಮಂತ್ರಿ ಕಚೇರಿಯಲ್ಲಿ ಹೇಳುತ್ತಿದ್ದಾರೆ'' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿನ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿಧಿಗಳ ಜತೆ ಮಾತನಾಡಿದ ಅವರು, ''ಸಾಕ್ಷಿ ಇಡೀ ಅಂತಾರೆ. ದುಡ್ಡು ಕೊಟ್ಟೋನು ಸಾಕ್ಷಿ ಇಡ್ತಾನ? ಅವನಿಗೆ ಕೆಲಸ ಆದರೆ ಸಾಕು. ಇವರು ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು
''ನಾನು ಏನೇ ಮಾತಾಡಿದರೂ ವಿಷಯ ಇದ್ದರೆ ಮಾತ್ರ ಮಾತನಾಡುತ್ತೇನೆ, ಇಲ್ಲವಾದರೆ ಮೌನವಾಗಿ ಇರುತ್ತೇನೆ. ರಾಜ್ಯಪಾಲರ ಭಾಷಣದಲ್ಲಿ ವೀರಾವೇಶ ತೋರುವ ಇವರು, ಅಧಿಕಾರಕ್ಕೆ ಒಂದು ತಿಂಗಳ ಮೇಲಾಯಿತು. ಇದುವರೆಗೆ ಲಂಚಾವತಾರದ ಈ ಸರಕಾರ ಏನು ಕ್ರಮ ಕೈಗೊಂಡಿದೆ. ಜನರಿಗೆ ಹೇಳಬೇಕಲ್ಲವೇ?'' ಎಂದು ತರಾಟೆಗೆ ತೆಗೆದುಕೊಂಡರು.
'''ದಾಖಲೆ ಇದ್ದರೆ ಕೊಡಲಿ ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೇನೆ. ದಾಖಲೆ ಕೊಡಿ ಎಂದವರೇ ಹಿಂದೆ ಬಿಜೆಪಿ ಸರಕಾರದ ವಿರುದ್ಧ 40% ಕಮಿಷನ್ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದರು. ಅವರು ಆಗ ದಾಖಲೆ ಇಟ್ಟಿದ್ದರಾ? ಈಗ ಅವರದೇ ಸರಕಾರ ಇದೆ, ದಾಖಲೆ ಬಿಡುಗಡೆ ಮಾಡಬಹುದು, ಅಲ್ಲವೇ?'' ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದರು.
''ಕಳೆದ ಒಂದೆರೆಡು ವರ್ಷಗಳಲ್ಲಿ ಕಾಂಗ್ರೆಸ್ ನಾಯಕರು ಜಾಗಟೆ ಹೊಡೆದ್ರಲ್ಲಪ್ಪ. ಪೇಸಿಎಂ ಅಂತ ರೋಡ್‌ನಲ್ಲಿ ಪೋಸ್ಟರ್ ಹಾಕಿದ್ರಲ್ಲ ಆಗ ದಾಖಲೆ ಇತ್ತಾ? ಮಧ್ಯಪ್ರದೇಶದಲ್ಲಿ ಕೂಡ ಅದನ್ನೆ ಎಕ್ಸ್‌ಪೆರಿಮೆಂಟ್ ಮಾಡಲಾಗಿದೆ. ಸಿಎಂ ಕಚೇರಿ ಏನಾಗಿದೆ ಅಂತ ಜಗಜ್ಜಾಹಿರಾಗಿದೆ'' ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ದ ಕಿಡಿಕಾರಿದರು.
''ರಾಜ್ಯದಲ್ಲಿ ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಜನರಿಗೆ ಏನು ಕೊಡಬೇಕೆಂಬ ಮುನ್ನೋಟ ಈ ಸರಕಾರಕ್ಕೆ ಇಲ್ಲ. ರಾಜ್ಯಪಾಲ ರ ಭಾಷಣದ ವೇಳೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿದ್ದು ನಾನು ನೋಡಲಿಲ್ಲ'' ಎಂದು ಅವರು ಟೀಕಿಸಿದರು.
''ಮಹಾರಾಷ್ಟ್ರ ರಾಜ್ಯದಲ್ಲಿ ಅಜಿತ್ ಪವಾರ್ ಅಲ್ಲಿನ ಸರಕಾರವನ್ನು ಬೆಂಬಲಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನಲ್ಲಿ ಯಾವ ಅಜಿತ್ ಪವಾರ್ ಬರುತ್ತಾರೋ ಗೊತ್ತಿಲ್ಲ'' ಎಂದು ಅವರು ವಿಶ್ಲೇಷಣೆ ಮಾಡಿದರು.